ADVERTISEMENT

ಬಾಗೇಪಲ್ಲಿ: ಟ್ರ್ಯಾಕ್ಟರ್‌ಗಳಿಗೆ ಪೊಲೀಸರ ತಡೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 2:04 IST
Last Updated 27 ಜನವರಿ 2021, 2:04 IST
ಬಾಗೇಪಲ್ಲಿ ಪಟ್ಟಣದ ಟಿ.ಬಿ.ಕ್ರಾಸ್‌ನಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಬಂದ ರೈತರನ್ನು ಪೊಲೀಸರು ತಡೆದರು
ಬಾಗೇಪಲ್ಲಿ ಪಟ್ಟಣದ ಟಿ.ಬಿ.ಕ್ರಾಸ್‌ನಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಬಂದ ರೈತರನ್ನು ಪೊಲೀಸರು ತಡೆದರು   

ಬಾಗೇಪಲ್ಲಿ: ನವದೆಹಲಿಯಲ್ಲಿ ಗಣರಾಜ್ಯೋತ್ಸವದ ರೈತರ ರ್‍ಯಾಲಿ ಬೆಂಬಲಿಸಿ, ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7ರ ಮೂಲಕ ಬೆಂಗಳೂರಿಗೆ ಟ್ರ್ಯಾಕ್ಟರ್‌ಗಳಲ್ಲಿ ಹೊರಟ ರೈತ ಮುಖಂಡರನ್ನು ಪೊಲೀಸರು ತಡೆದರು.

ಪಟ್ಟಣದ ಟಿ.ಬಿ.ಕ್ರಾಸ್‌ನಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು. ಇದರಿಂದ ರೈತರು ಹಾಗೂ ಪೊಲೀಸರ ನಡುವೆ ತಳ್ಳಾಟ ನಡೆಯಿತು.

ಬೆಂಗಳೂರಿನ ರ್‍ಯಾಲಿಗೆ ಟ್ರ್ಯಾಕ್ಟರ್‌ಗಳ ಪ್ರವೇಶವನ್ನು ಪೊಲೀಸ್ ಇಲಾಖೆ ನಿಷೇಧಿಸಿತ್ತು. ರೈತ ಮುಖಂಡರ ಮನೆ, ಸಂಘಟನೆಗಳ ಕಚೇರಿಗಳ ಮುಂದೆ ಯಾರೂ ಸೇರಿದಂತೆ ಪಟ್ಟಣದ ಮುಖ್ಯರಸ್ತೆಯುದ್ದಕ್ಕೂ ಪೊಲೀಸರು, ಗೃಹರಕ್ಷಕ ದಳದವರನ್ನು ನೇಮಿಸಲಾಗಿತ್ತು.

ADVERTISEMENT

ರಾಷ್ಟ್ರೀಯ ಹೆದ್ದಾರಿ-7 ರಸ್ತೆಗೆ ಟ್ರಾಕ್ಟರ್ ಗಳ ಪ್ರವೇಶ ನೀಡುವುದಿಲ್ಲ ಎಂದು ಪೊಲೀಸ್ ಇನ್‌ಸ್ಪೆಕ್ಟರ್‌ ನಯಾಜ್ ಬೇಗ್ ರೈತಪರ ಸಂಘಟನೆಗಳ ಮುಖಂಡರಿಗೆ ತಿಳಿಸಿದರು. ‘ನಾವು ಬೆಂಗಳೂರಿನ ರೈತರ ರ್‍ಯಾಲಿಗೆ ಹೋಗಿಯೇ ತೀರುತ್ತೇವೆ’ ಎಂದು ರೈತ ಪರ ಸಂಘಟನೆಗಳ ಮುಖಂಡರು ತಿಳಿಸಿದರು. ಇದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಯಿತು.

ಪಟ್ಟಣದ ನ್ಯಾಷನಲ್ ಕಾಲೇಜಿನ ಮುಂದೆ ರಾಜ್ಯ ರೈತ ಸಂಘ, ಹಸಿರುಸೇನೆ, ಪ್ರಾಂತ ರೈತ ಸಂಘ (ಕೆಪಿಆರ್ ಎಸ್), ಪ್ರಾಂತ ಕೃಷಿಕೂಲಿಕಾರರ ಸಂಘಟನೆ, ಎಸ್.ಎಫ್.ಐ, ಡಿವೈಎಫ್ಐ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ರೈತರು ಟ್ರ್ಯಾಕ್ಟರ್‌ಗಳಲ್ಲಿ ಬಂದಿದ್ದರು. ತಾಲ್ಲೂಕಿನ ಮಿಟ್ಟೇಮರಿ, ಗೂಳೂರು, ಪಾತಪಾಳ್ಯ ಕಡೆಯಿಂದ ಬಂದಿದ್ದ ರೈತರು ಟ್ರ್ಯಾಕ್ಟರ್‌ಗಳಿಗೆ ರಾಷ್ಟ್ರಧ್ವಜ, ರೈತ ಧ್ವಜ ಹಾಗೂ ಕೆಂಬಾವುಟಗಳನ್ನು ಕಟ್ಟಿದ್ದರು.

ಚಿಕ್ಕಬಳ್ಳಾಪುರ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಥಳಕ್ಕೆ ಬಂದು, ಟ್ರ್ಯಾಕ್ಟರ್‌ಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಬಿಡದಂತೆ ಸೂಚಿಸಿದರು.

ಪ್ರಾಂತ ಕೂಲಿಕಾರರ ಸಂಘಟನೆ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ ‘ರೈತರು ಶಾಂತ ರೀತಿಯಲ್ಲಿ ಹೋರಾಟ ಮಾಡಲು ಸರ್ಕಾರಗಳು ಬಿಡುತ್ತಿಲ್ಲ. ಕೃಷಿ, ಎಪಿಎಂಸಿ, ವಿದ್ಯುತ್ ಕಾಯಿದೆಗಳಿಗೆ ತಿದ್ದುಪಡಿ ತಂದು, ಕೃಷಿಕರನ್ನು ದಿವಾಳಿ ಮಾಡುತ್ತಿದೆ. ನೂತನ ಕಾಯಿದೆಗಳನ್ನು ವಾಪಸ್ ಪಡೆಯುವವರಿಗೂ ರೈತರ ಹೋರಾಟ ಮುಂದುವರೆಯುತ್ತದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಾಮನಾಯಕ್, ಪ್ರಾಂತ ರೈತ ಸಂಘ ತಾಲ್ಲೂಕು ಕಾರ್ಯದರ್ಶಿ ಪಿ.ಮಂಜುನಾಥರೆಡ್ಡಿ, ಹಸಿರುಸೇನೆ ರಾಜ್ಯ ಸಂಚಾಲಕ ಲಕ್ಷ್ಮಣರೆಡ್ಡಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ರೈತ ಸಂಘದ ರಾಜ್ಯ ಮಹಿಳಾ ಸಂಚಾಲಕಿ ಸಿ.ಉಮಾ, ತಾಲ್ಲೂಕು ಮಹಿಳಾ ಅಧ್ಯಕ್ಷ ಟಿ.ಆರ್.ಪ್ರಮೀಳ, ಅನಿತ, ಸಿಐಟಿಯು ತಾಲ್ಲೂಕು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಕಾರ್ಯದರ್ಶಿ ಜಿ.ಮುಸ್ತಾಫ, ಮುಖಂಡರಾದ ಮಹಮದ್ ಅಕ್ರಂ, ಅಶ್ವಥ್ಥಪ್ಪ, ಬಿ.ಎಚ್.ರಫೀಕ್, ಡಿ.ವೈ.ಎಫ್ ಐ ಜಿಲ್ಲಾ ಅಧ್ಯಕ್ಷ ಹೇಮಚಂದ್ರ, ಎಸ್ ಎಫ್ ಐ ರಾಜ್ಯ ಸಮಿತಿ ಸದಸ್ಯ ಸೋಮಶೇಖರ್, ತಾಲ್ಲೂಕು ಅಧ್ಯಕ್ಷ ಸತೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.