ADVERTISEMENT

ಎಲ್ಲ ಕಾಲಕ್ಕೂ ಚಾಡಿಕೋರರಿಗೆ ಯಶಸ್ಸು: ಕೆ.ಆರ್.ರಮೇಶ್ ಕುಮಾರ್

ಕೆಪಿಸಿಸಿ ಮಾಜಿ ಅಧ್ಯಕ್ಷ ಕೃಷ್ಣರಾವ್ ಅವರ 100ನೇ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 3:11 IST
Last Updated 6 ನವೆಂಬರ್ 2025, 3:11 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಕೃಷ್ಣರಾವ್ ಅವರ ಜನ್ಮದಿನದ ‌ ಕಾರ್ಯಕ್ರಮವನ್ನು ಸಚಿವ ಡಾ.ಎಂ.ಸಿ.ಸುಧಾಕರ್, ಕೆ.ಆರ್.ರಮೇಶ್ ಕುಮಾರ್ ಹಾಗೂ ಗಣ್ಯರು ಉದ್ಘಾಟಿಸಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಕೃಷ್ಣರಾವ್ ಅವರ ಜನ್ಮದಿನದ ‌ ಕಾರ್ಯಕ್ರಮವನ್ನು ಸಚಿವ ಡಾ.ಎಂ.ಸಿ.ಸುಧಾಕರ್, ಕೆ.ಆರ್.ರಮೇಶ್ ಕುಮಾರ್ ಹಾಗೂ ಗಣ್ಯರು ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ರಾಜಕೀಯದಲ್ಲಿ ಯಾವುದು ಸರಿ ಯಾವುದು ತಪ್ಪು, ಏಕೆ ಹೀಗೆ ಎನ್ನುವುದು ಗೊತ್ತಾಗುವುದಿಲ್ಲ. ಯಾರು ಚಾಡಿ ಹೇಳುವರೊ ಅವರು ಯಶಸ್ಸು ಸಾಧಿಸುವರು. ಇದು ಈ ಹಿಂದೆ ಇಂದಿರಾಗಾಂಧಿ– ದೇವರಾಜ ಅರಸು ಅವರ ಕಾಲದಿಂದ ಹಿಡಿದು ಇವತ್ತಿನವರೆಗೂ ಇದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.

ನಗರದಲ್ಲಿ ವಿ.ಕೃಷ್ಣರಾವ್ ಅಭಿಮಾನಿ ಬಳಗವು ಬುಧವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಕೃಷ್ಣರಾವ್ ಅವರ 100ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜಕಾರಣದ ಇಂದಿನ ಪರಿಸ್ಥಿತಿ ಬದಲಾಗಿದೆ. ಚುನಾವಣೆಗಳಲ್ಲಿ ಸ್ಪರ್ಧೆ ಮಾಡಬೇಕು ಎಂದರೆ ಕ್ವಾರಿ, ಕಾಲೇಜು ಅಥವಾ ಮತ್ತೊಂದು ವ್ಯವಹಾರ ಇರಬೇಕು ಎನ್ನುವ ಸ್ಥಿತಿಗೆ ಬಂದಿದ್ದೇವೆ. ಸಾರ್ವಜನಿಕ ಜೀವನದಲ್ಲಿ ಇದ್ದವರಿಗೆ ಸಭ್ಯತೆ, ವಿನಯ ಇರಬೇಕು. ಆದರೆ ಇವು ಕಾಣಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

ಕೃಷ್ಣರಾವ್ ಅವರು ಬದುಕಿಲ್ಲ. ಅವರ ಪುತ್ರರ ಬಳಿ ಹಣ ಕೊಟ್ಟು ಜನರನ್ನು ಕರೆದುಕೊಂಡು ಬರಲು ಸಾಧ್ಯವಿಲ್ಲ. ಆದರೆ ಇಲ್ಲಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸೇರಿದ್ದಿರಿ. ಅಂದ ಮೇಲೆ ರಾಜಕಾರಣದಲ್ಲಿ ಇನ್ನೂ ನಾವು ಒಂದಿಷ್ಟು ಆಶಾವಾದ ಇಟ್ಟುಕೊಳ್ಳಬಹುದು ಎಂದು ಹೇಳಿದರು.

ಕೃಷ್ಣರಾಯರು ಬ್ರಾಹ್ಮಣ. ನಾನೂ ಬ್ರಾಹ್ಮಣ. ಆದರೆ ಇಬ್ಬರಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಅವರು ಊಟದ ವಿಚಾರದಲ್ಲಿ ತುಂಬಾ ಶಿಸ್ತು. ನಾನು ಇದಕ್ಕೆ ವಿರುದ್ಧ. ನನಗೆ ಹೆಚ್ಚು ಸಿಟ್ಟು. ಅವರು ಮೃಧು. ನಮ್ಮಿಬ್ಬರನ್ನು ರಾಜಿ ಮಾಡಿಸಬೇಕು ಎಂದು ಗುಂಡೂರಾಯರು ಬಹಳ ಪ್ರಯತ್ನಿಸಿದರು ಎಂದು ಹೇಳಿದರು.

ಕೃಷ್ಣರಾವ್ ಅವರಿಗೆ ರಾಜ್ಯಪಾಲರಾಗಬೇಕು ಎನ್ನುವ ಆಸೆ ಇತ್ತು. ಆದರೆ ಸಾಧ್ಯವಾಗಲಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ರಾಜಕೀಯ ಜೀವನ ಆರಂಭಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನದವರೆಗೆ ತಲುಪುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದು ಕೆಲವರಿಗೆ ಮಾತ್ರ ಸಾಧ್ಯ. ಅಂತಹವರಲ್ಲಿ ಕೃಷ್ಣರಾವ್ ಒಬ್ಬರು ಎಂದು ಸ್ಮರಿಸಿದರು.

ದೇವರಾಜ ಅರಸು  ಜಾತಿ, ಮತ, ಊರು ಕೇರಿ ನೋಡದೆ ವಿಳಾಸವಿಲ್ಲದವರನ್ನೂ ಹುಡುಕಿ ಟಿಕೆಟ್ ನೀಡಿದರು. ರಾಜಕಾರಣದಲ್ಲಿ ಹೊಸ ಚರಿತ್ರೆ ಬರೆದ ಮಹಾನುಭಾವ ಅವರು ಎಂದರು. 

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ವಿ.ಕೃಷ್ಣರಾವ್, ಆರ್.ಎಲ್.ಜಾಲಪ್ಪ, ಪ್ರಸನ್ನಕುಮಾರ್, ಪಾಪಯ್ಯ ಮತ್ತಿತರ ಸಣ್ಣ ಸಮುದಾಯಗಳ ನಾಯಕರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಜಾತಿ ಮೀರಿ ಮತ ಕೊಟ್ಟು ಗೆಲ್ಲಿಸಿದರು. ಜಿಲ್ಲೆಯಲ್ಲಿ ಮಾದರಿ ಮತ್ತು ಆದರ್ಶ ರಾಜಕಾರಣದ ಹೆಜ್ಜೆ ಗುರುತುಗಳು ಇವೆ ಎಂದು ಹೇಳಿದರು. 

ಕೃಷ್ಣರಾವ್ ಅವರ ಹೆಸರಿನಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರಿನಲ್ಲಿ ಆಗಬೇಕು. ಕೃಷ್ಣರಾವ್ ಅವರಿಗೆ ಪಿ.ವಿ. ನರಸಿಂಹರಾವ್ ಅವರ ಜೊತೆ ಉತ್ತಮ ಸಂಬಂಧವಿತ್ತು. ತಮಗೆ ದೊರೆತ ಯಾವುದೇ ಸ್ಥಾನಗಳಿಗೂ ಚ್ಯುತಿ ಬಾರದ ರೀತಿಯಲ್ಲಿ ನಡೆದುಕೊಂಡರು ಎಂದು ಸ್ಮರಿಸಿದರು.

ಎಚ್‌.ಎನ್.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್.ಶಿವಶಂಕರ ರೆಡ್ಡಿ ಮಾತನಾಡಿ, ನಾನು, ವಿ.ಮುನಿಯಪ್ಪ, ಕೆ.ಎಚ್.ಮುನಿಯಪ್ಪ, ಅಶ್ವತ್ಥನಾರಾಯಣ್ ಮತ್ತಿತರರು ಕೃಷ್ಣರಾವ್ ಅವರ ಗರಡಿಯಲ್ಲಿ ಬೆಳೆದೆವು ಎಂದರು.

ಗೌರಿಬಿದನೂರು ತಾಲ್ಲೂಕಿನ ಜನರು ಕೃಷ್ಣರಾವ್ ಅವರನ್ನು ಬೆಂಬಲಿಸಿದರು. ಅವರು ಶಾಸಕರಾಗಿ, ಮೂರು ಬಾರಿ ಸಂಸದರಾಗಿ ಹಲವು ಜನಪರ ಕೆಲಸ ಮಾಡಿದ್ದಾರೆ. ಅವರ ಅನುಯಾಯಿಗಳು ಎಲ್ಲ ಕಡೆ ಇದ್ದಾರೆ ಎಂದು ಸ್ಮರಿಸಿದರು.

ಮಾಲೂರು ಮಾಜಿ ಶಾಸಕ ನಾಗರಾಜ್, ಕೃಷ್ಣರಾವ್ ಅವರ ಜೊತೆಗಿನ ಒಡನಾಡವನ್ನು ಮೆಲುಕು ಹಾಕಿದರು. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ‘ಲಾಯರ್’ ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಕೃಷ್ಣರಾವ್ ಅವರ ಪುತ್ರರಾದ ವೆಂಕಟರಮಣಪ್ಪ, ನಾಗಭೂಷಣ್, ಕೋಚಿಮುಲ್ ಮಾಜಿ ಅಧ್ಯಕ್ಷ ಗುಡಿಯಪ್ಪ, ಕಾಂಗ್ರೆಸ್ ಮುಖಂಡರಾದ  ಮರಿಯಪ್ಪ,  ವೆಂಕಟಾಚಲರಾಜು, ಎಚ್.ಎಂ.ನಾಗರಾಜ್, ಮಂಚೇನಹಳ್ಳಿ ಪ್ರಕಾಶ್, ಭರಣಿ ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು

‘ನಡುರಾತ್ರಿಯೂ ಸಮಾರಂಭಗಳಿಗೆ ಭೇಟಿ’

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಾವು ಕೃಷ್ಣರಾವ್ ಅವರ ಬಗ್ಗೆ ಕೇಳಿದ ಮತ್ತು ಕಂಡ ಮಾಹಿತಿ ಹಂಚಿಕೊಂಡರು. ‘ನಾನು ಹತ್ತಿರದಿಂದ ಅವರನ್ನು ನೋಡಿದ್ದೇನೆ. ಸರಳ ಸಜ್ಜನಿಕೆಯ ಕೃಷ್ಣರಾವ್ ಅವರು ಜಕಾರಣದಲ್ಲಿ ಏಳು ಬೀಳು ಅನುಭವಿಸಿ ಕೆಪಿಸಿಸಿ  ಅಧ್ಯಕ್ಷರಾದರು. ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ’ ಎಂದರು. ಸಾರ್ವಜನಿಕ ಜೀವನದಲ್ಲಿ ಸಮಯ ಹೊಂದಿಸಿಕೊಳ್ಳುವುದು ಸಾಮಾನ್ಯವಲ್ಲ. ಆದರೆ ಕೃಷ್ಣರಾವ್ ಅವರು ಮದುವೆ ಗೃಹಪ್ರವೇಶ ಸೇರಿದಂತೆ ಜನರು ಆಹ್ವಾನಿಸಿದ ಎಲ್ಲ ಕಾರ್ಯಕ್ರಗಳಿಗೂ ಹೋಗುತ್ತಿದ್ದರಂತೆ. ರಾತ್ರಿ 10 12 ಗಂಟೆಗೆ ಹೋಗಿ ವಧು ವರನನ್ನು ಆಶೀರ್ವದಿಸಿದ್ದಾರಂತೆ ಎಂದರು. 

‘ಚಿಕ್ಕಬಳ್ಳಾಪುರಕ್ಕೆ ಹಿಡಿದ ಜಾಡ್ಯ ತೊಲಗಬೇಕು’

ರಾಜ್ಯ ಬೀಜ ನಿಗಮದ ಅಧ್ಯಕ್ಷ ನಂದಿ ಆಂಜನಪ್ಪ ಮಾತನಾಡಿ ರಾಜಕಾರಣದಲ್ಲಿ ಮತ ನೀಡಿದವರನ್ನು ಮತ ಕೊಡಿಸಿದವರನ್ನು ಯಾವತ್ತೂ ಮರೆಯಬಾರದು. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ದರಿದ್ರ ಹಿಡಿದಿದೆ. ಈ ಜಾಡ್ಯ ತೊಲಗಬೇಕು. ಸುಸಂಸ್ಕೃತರು ಚಿಕ್ಕಬಳ್ಳಾಪುರ ರಾಜಕೀಯಕ್ಕೆ ಬರಬೇಕು ಎಂದರು. ದರೋಡೆಕೋರರು ಹುಚ್ಚಾಸ್ಪತ್ರೆಯ ಗಿರಾಕಿಗಳು ರಾಜಕೀಯಕ್ಕೆ ಬರಬಾರದು. ಇಂದಿನ ರಾಜಕೀಯ ಬೆಳವಣಿಗೆಗಳನ್ನು ನೋಡಿ ರಾಜಕೀಯದ ಸಹವಾಸ ಬೇಡ ಎಂದು ಸುಮ್ಮನೆ ಇದ್ದೆ. ಆದರೆ ಹಲವು ನಾಯಕರು ನಿಗಮದ ಅಧ್ಯಕ್ಷ ಸ್ಥಾನ ಕೊಡಿಸಿದರು ಎಂದರು. ಸಾಲಗಾರರು ಬಂದರೆ ತಲೆ ತಪ್ಪಿಸಿಕೊಂಡು ಹೋಗುತ್ತಿದ್ದವರು ಈಗ ಸಾವಿರಾರು ಕೋಟಿ ಒಡೆಯರಾಗಿದ್ದಾರೆ. ರಾಜಕಾರಣದಲ್ಲಿ ಪ್ರಾಮಾಣಿಕತೆ ಮತ್ತು ಸರಳತೆ ಮುಖ್ಯ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.