ADVERTISEMENT

ಮೂವರೂ ಮಕ್ಕಳಿಗೆ ದೃಷ್ಟಿದೋಷ, ಮನೆಯಲ್ಲಿ ಬಡತನ: ನೆರವಿಗೆ ವೃದ್ಧ ದಂಪತಿ ಅಲೆದಾಟ

ಪಿ.ಎಸ್.ರಾಜೇಶ್
Published 3 ಡಿಸೆಂಬರ್ 2020, 3:59 IST
Last Updated 3 ಡಿಸೆಂಬರ್ 2020, 3:59 IST
ಬಾಗೇಪಲ್ಲಿ ತಾಲ್ಲೂಕಿನ ಚಿನ್ನಂಪಲ್ಲಿ ಗ್ರಾಮದ ವೆಂಕಟರೆಡ್ಡಿ ಅವರ ಕುಟುಂಬ
ಬಾಗೇಪಲ್ಲಿ ತಾಲ್ಲೂಕಿನ ಚಿನ್ನಂಪಲ್ಲಿ ಗ್ರಾಮದ ವೆಂಕಟರೆಡ್ಡಿ ಅವರ ಕುಟುಂಬ   

ಬಾಗೇಪಲ್ಲಿ: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೆಲಸ ಮಾಡಲಾಗದ ವೃದ್ಧರು. ಒಂದೇ ಮನೆಯಲ್ಲಿ ಮೂವರಿಗೆ ದೃಷ್ಟಿದೋಷ. ಸರ್ಕಾರದ ಯೋಜನೆಗಳು ಸಿಗದ ಕುಟುಂಬಕ್ಕೆ ನರಕಯಾತನೆ. ಒಪ್ಪತ್ತಿನ ಊಟ, ವಸತಿಗೂ ಪರದಾಟ.

–ಇದು ತಾಲ್ಲೂಕಿನ ಚಿನ್ನಂಪಲ್ಲಿ ಗ್ರಾಮದ ದೃಷ್ಟಿದೋಷವುಳ್ಳ ಮಕ್ಕಳಿರುವ ಕುಟುಂಬದ ಬದುಕಿನ ಚಿತ್ರಣ. ಈ ಕುಟುಂಬ ನೆರವಿನ ಹಸ್ತ ಚಾಚುತ್ತಿದೆ. ಮಿಟ್ಟೇಮರಿ ಹೋಬಳಿಯಲ್ಲಿ ಚಿನ್ನಂಪಲ್ಲಿ ಇದೆ. ಈ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ವೆಂಕಟರೆಡ್ಡಿ ಹಾಗೂ ಆದಿಲಕ್ಷ್ಮಮ್ಮ ವಾಸವಾಗಿದ್ದಾರೆ. ಅವರಿಗೆ ಮೂವರು ಮಕ್ಕಳಾದ ರಾಮಕೃಷ್ಣಾರೆಡ್ಡಿ, ಮಂಜುನಾಥ್ ಹಾಗೂ ರತ್ನಮ್ಮ ಇದ್ದಾರೆ. ಇವರು ಹುಟ್ಟಿನಿಂದಲೂ ದೃಷ್ಟಿದೋಷ ಹೊಂದಿದ್ದಾರೆ.

ರಾಮಕೃಷ್ಣಾರೆಡ್ಡಿ, ರತ್ನಮ್ಮ ಅಕ್ಷರಸ್ಥರಾಗಿದ್ದಾರೆ. ಉತ್ತಮ ಗಾಯಕರಾಗಿದ್ದಾರೆ. ರಾಮಕೃಷ್ಣಾರೆಡ್ಡಿ ಪ್ರತಿನಿತ್ಯ ಶಾಲೆ-ಕಾಲೇಜುಗಳಿಗೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಹಾಡು ಹೇಳಿ ಗಳಿಸಿದ ಹಣದಲ್ಲಿ ಇಡೀ ಕುಟುಂಬ ಜೀವನ ಸಾಗಿಸುವಂತಾಗಿದೆ.

ADVERTISEMENT

ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ರತ್ನಮ್ಮ ಕೆಲಸ ಮಾಡುತ್ತಿದ್ದಾರೆ. ಮಂಜುನಾಥ್‌ಗೆ ಕೆಲಸ ಇಲ್ಲ. ಕೊರೊನಾ ಸಂಕಷ್ಟದ ನಡುವೆ ಈ ಕುಟುಂಬದ ಊಟ, ವಸತಿಗೂ ಪರದಾಡುತ್ತಿದೆ. ಪಾಳುಬಿದ್ದ ಮನೆಯಲ್ಲಿಯೇ ವಾಸ. ವೃದ್ಧ ತಂದೆ-ತಾಯಿಗೆ ಕೂಲಿ ಮಾಡಲು ಶಕ್ತಿ ಇಲ್ಲ. ಇವರಿಗೆ ಸರ್ಕಾರದ ಅಂಗವಿಕಲರ ಮಾಸಾಶನ ಬಿಟ್ಟರೆ ಬೇರೆ ಸೌಲಭ್ಯ ದೊರೆತಿಲ್ಲ.

ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಆದರೆ, ಸಮರ್ಪಕವಾಗಿ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ. ಇದರಿಂದ ಕುಟುಂಬ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದೆ.

ಗ್ರಾಮದಲ್ಲಿ ಪಡಿತರ ವಿತರಣೆಯ ವ್ಯವಸ್ಥೆ ಇಲ್ಲ. ಮಿಟ್ಟೇಮರಿಯಿಂದ ಪಡಿತರ ಪದಾರ್ಥ ಹೊತ್ತು ತರಬೇಕಾಗಿದೆ. ಅಷ್ಟು ದೂರದಿಂದ ಹೊತ್ತು ತರಲು ಇವರ ಕೈಯಲ್ಲಿ ಆಗುವುದಿಲ್ಲ. ಇರುವ ಜಮೀನಿನಲ್ಲಿ ಕೃಷಿ ಮಾಡಲು ಆಗದಂತಾಗಿದೆ.

‘ತಂದೆ -ತಾಯಿಗೆ ವಯಸ್ಸಾಗಿದೆ. ಮೂವರು ದೃಷ್ಟಿದೋಷ ಹೊಂದಿದ್ದೇವೆ. ಏನೂ ಕೆಲಸ ಮಾಡಲು ಆಗುತ್ತಿಲ್ಲ. ಊಟ, ವಸತಿಗೆ ಪರದಾಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಂಗವಿಕಲರಿಗೆ ವಿಶೇಷ ಸೌಲಭ್ಯ ಕಲ್ಪಿಸಿದೆ. ಅಂಗವಿಕಲರಿಗೆ ಮೀಸಲಾದ ಸಾಲ ಸೌಲಭ್ಯ, ವಿಮೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನಮಗೆ ಕಲ್ಪಿಸಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ.

‘ಹಲವು ಬಾರಿ ಜಿಲ್ಲಾ ಕೇಂದ್ರದ ಅಂಗವಿಕಲರ ಕಲ್ಯಾಣ ಕಚೇರಿಗೆ ತಿರುಗಿದ್ದೇನೆ. ನಮಗೆ ಸಾಲ, ವಿಮೆ ಸೇರಿದಂತೆ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಆರ್ಥಿಕ ನೆರವು ಕಲ್ಪಿಸಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಯವರು ನಮಗೆ ಆರ್ಥಿಕ ನೆರವು ನೀಡಿದರೆ ಕುಟುಂಬಕ್ಕೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ರಾಮಕೃಷ್ಣಾರೆಡ್ಡಿ.

‘ಮಕ್ಕಳಿಗೂ ದೃಷ್ಟಿದೋಷವಿದೆ. ಹಾಗಾಗಿ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲ. ಇರುವ ಜಮೀನಿನಲ್ಲಿ ಬೆಳೆ ಬೆಳೆಯಲು ಆಗುತ್ತಿಲ್ಲ. ಇದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ’ ಎಂದು ನೋವು ತೋಡಿಕೊಂಡರು ವೆಂಕಟರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.