
ಗೌರಿಬಿದನೂರು: ತಾಲ್ಲೂಕಿನ ಹಾಲಗಾನಹಳ್ಳಿಯಲ್ಲಿ ಅಂಚೆ ಕಚೇರಿ ಪೇದೆ ರಮ್ಯಾ ಖಾತೆದಾರರ ಹಣವನ್ನು ಪಡೆದು ಗ್ರಾಹಕರಿಗೆ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಹಾಲಗಾನಹಳ್ಳಿ ಗ್ರಾಮಕ್ಕೆ ಅಧಿಕಾರ ತಂಡ ಭೇಟಿ ನೀಡಿದರು.
ಅಧಿಕಾರಿಗಳ ಮತ್ತು ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ನಂತರ ಅಧಿಕಾರಿಗಳ ತಂಡ 150 ರಿಂದ 200 ಖಾತೆದಾರರು ನೀಡಿರುವ ಹಣದ ಮಾಹಿತಿಯನ್ನು ದಾಖಲಿಸಿಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥರಿಂದ ಮಾಹಿತಿ ನೀಡಿದರು.
ಶನಿವಾರ ಗ್ರಾಮಸ್ಥರು ಮತ್ತು ಖಾತೆದಾರರು ನಗರದ ಉಪ ಅಂಚೆ ಕಚೇರಿಗೆ ನುಗ್ಗಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸಂಜೆ ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಖಾತೆದಾರರಿಂದ ಮಾಹಿತಿ ಪಡೆಯಲಾಗುವುದು ಎಂದು ಭರವಸೆ ನೀಡಿದ್ದರು.
ಶನಿವಾರ ರಾತ್ರಿ ಹಾಲಗಾನಹಳ್ಳಿ ಗ್ರಾಮದ ನಾಗಮಣಿ ಎಂಬುವವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ರಮ್ಯಾ ಎಂಬ ಅಂಚೆ ಕಚೇರಿ ಪೇದೆಯೊಬ್ಬರು ಮನೆ ಬಳಿ ಬಂದು, ಆರ್.ಡಿ ಕಟ್ಟುವಂತೆ ಒತ್ತಾಯಿಸಿದರು. ನನಗೆ ಐದು ವರ್ಷಗಳಿಗೆ ₹6 ಲಕ್ಷದ ಎರಡು ಆರ್.ಡಿ ಖಾತೆಗಳನ್ನು ಮಾಡಿಕೊಡುತ್ತೇನೆಂದು ಹೇಳಿದರು. ಅದರಂತೆ ₹12 ಲಕ್ಷ ನೀಡಿರುತ್ತೇನೆ. ಅದಕ್ಕೆ ಅವರು ಒಂದೂವರೆ ತಿಂಗಳ ನಂತರ ಎರಡು ಆರ್.ಡಿ ಪಾಸ್ ಪುಸ್ತಕಗಳಲ್ಲಿ ಕೈ ಬರಹದಲ್ಲಿ ಹಣ ಸಂದಾಯವಾಗಿರುವುದನ್ನು ಬರೆದು ಕೊಟ್ಟಿದ್ದಾರೆ. ಕೆಲ ತಿಂಗಳ ನಂತರ ಅಂಚೆ ಕಚೇರಿಯಲ್ಲಿ ವಿಚಾರಿಸಿದಾಗ ನನ್ನ ಖಾತೆಗೆ ಕೇವಲ ಒಂದು ಲಕ್ಷ ಮಾತ್ರ ಕಟ್ಟಿ, ಉಳಿದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೇಳಲು ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಿಲ್ಲ. ಇದೇ ರೀತಿ ಗ್ರಾಮದಲ್ಲಿ ಹಲವರ ಹಣವನ್ನು ರಮ್ಯಾ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.