
ಗೌರಿಬಿದನೂರು: ಹಾಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಮಹಿಳೆಯರನ್ನು ಮತ್ತು ವೃದ್ಧರನ್ನು ಅಂಚೆ ಕಚೇರಿಯಲ್ಲಿ ಹಣ ಕಟ್ಟುವುದಾಗಿ ನಂಬಿಸಿ ಕೋಟ್ಯಂತರ ಹಣ ವಂಚನೆ ಮಾಡಿರುವ ಅಂಚೆಪೇದೆ ರಮ್ಯಾ ಅವರಿಂದ ಹಣ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿ ನೂರಾರು ಖಾತೆದಾರರು ನಗರದ ಉಪ ಅಂಚೆ ಕಚೇರಿಗೆ ನುಗ್ಗಿ ಶನಿವಾರ ಪ್ರತಿಭಟನೆ ನಡೆಸಿದರು.
ಬೆಳಗ್ಗೆಯೇ ಟ್ರ್ಯಾಕ್ಟರ್‌ಗಳಲ್ಲಿ ಅಂಚೆ ಕಚೇರಿಗೆ ಬಂದ ಖಾತೆದಾರರು, ಸಂಜೆಯಾದರು ಅಂಚೆ ಕಚೇರಿ ಆವರಣದಿಂದ ಕದಲದೇ ಸಿಬ್ಬಂದಿ ವಿರುದ್ಧ ಘೋಷಣೆ ಕೂಗಿದರು.
ಖಾತೆದಾರರು ಅಂಚೆ ಕಚೇರಿ ಆವರಣದಲ್ಲೇ ಕುಳಿತರು. ನ್ಯಾಯ ಸಿಗುವವರೆಗೆ ಸ್ಥಳದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕೆ ಧಾವಿಸಿದ ನಗರ ಠಾಣೆ ಪಿಎಸ್‌ಐ ಗೋಪಾಲ್ ಮತ್ತು ಗ್ರಾಮಾಂತರ ಠಾಣೆ ಪಿಎಸ್‌ಐ ರಮೇಶ್ ಗುಗ್ಗರಿ ಖಾತೆದಾರರ ಮನವೊಲಿಸಲು ಪ್ರಯತ್ನಿಸಿದರು. ಕೆಲಕಾಲ ಗ್ರಾಹಕರ ಮತ್ತು ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನೆ ನಡೆಯುತ್ತಿದ್ದರೂ ಅಂಚೆ ಕಚೇರಿ ಮೇಲಧಿಕಾರಿಗಳು ಕಚೇರಿ ಕಡೆ ಸುಳಿಯಲಿಲ್ಲ. ಪೊಲೀಸರು ಘಟನಾ ಸ್ಥಳಕ್ಕೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿದರು ಸಹ ಅವರು ಬರಲಿಲ್ಲ. ಇದರಿಂದ ಹಣ ಕಳೆದುಕೊಂಡವರ ಆಕ್ರೋಶ ಹೆಚ್ಚಾಯಿತು. ಕಚೇರಿಯಲ್ಲೇ ಊಟದ ವ್ಯವಸ್ಥೆ ಮಾಡಿಕೊಂಡು ಪ್ರತಿಭಟನೆ ಮುಂದುವರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ, ಹಣ ಕಳೆದುಕೊಂಡ ಖಾತೆದಾರರ ಮಾಹಿತಿಯನ್ನು ಪೊಲೀಸರು ಮತ್ತು ಅಂಚೆ ಇಲಾಖೆಯವರು ಪಡೆದುಕೊಂಡು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡು ಹಣ ವಾಪಾಸ್ ಕೊಡಿಸುತ್ತಾರೆ. ಜನ ತಾಳ್ಮೆ ಕಳೆದುಕೊಂಡು ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.
ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಹಣ ವಾಪಸ್ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ವೃತ್ತ ನಿರೀಕ್ಷಕ ಅಂಜನ್ ಕುಮಾರ್‌ಗೆ ಸೂಚನೆ ನೀಡಿದರು.
ಸಂಜೆ ಚಿಕ್ಕಬಳ್ಳಾಪುರದಿಂದ ಆಗಮಿಸಿದ ನಿರೀಕ್ಷಕ ಶಶಿಕುಮಾರ್ ಹರಸೀಕೆರೆ, ‘ಘಟನೆಯ ತನಿಖೆಗೆ ಮೇಲಧಿಕಾರಿಗಳು ನನ್ನನ್ನು ತನಿಖಾ ಅಧಿಕಾರಿಯಾಗಿ ನೇಮಿಸಿದ್ದಾರೆ. ಭಾನುವಾರದಿಂದಲೇ ತನಿಖಾ ತಂಡ ಹಾಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಪ್ರತಿ ಮನೆಗೂ ಭೇಟಿ ನೀಡಿ ದಾಖಲೆ ಪಡೆದು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತೇವೆ. ತನಿಖೆ ನಡೆಸಿ ಹಣ ಕಟ್ಟಿರುವವರಿಗೆ ಪೂರ್ತಿ ಹಣ ಹಿಂತಿರುಗಿಸುವ ಜವಾಬ್ದಾರಿ ನಮ್ಮ ಇಲಾಖೆಯದ್ದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.