ಬಾಗೇಪಲ್ಲಿ: ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಅವರ ಹೆಸರು ನಾಮಕರಣ ವಿರೋಧಿಸಿ, ಜಲಾಶಯಕ್ಕೆ ಶ್ರೀರಾಮರೆಡ್ಡಿ ಹೆಸರು ಅಥವಾ ಚಿತ್ರಾವತಿ ಜಲಾಶಯ ಎಂದು ಮುಂದುವರೆಸಬೇಕು ಎಂದು ಒತ್ತಾಯಿಸಿ ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ನೇತೃತ್ವದಲ್ಲಿ ಶನಿವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಲಾಯಿತು.
ಪುರಸಭಾ ಕಾರ್ಯಾಲಯದ ಸಾರ್ವಜನಿಕ ಪ್ರಕಟಣೆ ಉಲ್ಲೇಖಿಸಿ ವಿವಿಧ ಪಕ್ಷಗಳ ಮುಖಂಡರು, ರೈತಪರ, ದಲಿತ, ಕೃಷಿಕೂಲಿಕಾರ್ಮಿಕರು ಹಾಗೂ ಜಿವಿಎಸ್ ಅಭಿಮಾನಿಗಳು 200ಕ್ಕೂ ಹೆಚ್ಚು ಜನರು ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣಜಲಾಶಯ ಹೆಸರು ನಾಮಕರಣ ಮಾಡದಂತೆ ತಕರಾರು ಅರ್ಜಿಗಳನ್ನು ತುಂಬಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭಾ ಕಂದಾಯ ಅಧಿಕಾರಿ ಅಥಾವುಲ್ಲಾ ಹಾಗೂ ಲೆಕ್ಕಾಧಿಕಾರಿ ಶ್ರೀಧರ್ ಅವರಿಗೆ ಸಲ್ಲಿಸಿದರು.
ಮುಖಂಡ ಡಾ.ಅನಿಲ್‍ಕುಮಾರ್ ಮಾತನಾಡಿ, ‘ಕ್ಷೇತ್ರದ ಗ್ರಾಮಗಳಿಗೆ ಇಂದಿಗೂ ರಸ್ತೆ, ಶಾಲೆ ಇಲ್ಲ. ಕುಡಿಯುವ ನೀರಿನ ಹಾಗೂ ಕೈಗಾರಿಕೆಯನ್ನು ಕಾಂಗ್ರೆಸ್ ಶಾಸಕರ ಆಡಳಿತದಲ್ಲಿ ಮಾಡಿಲ್ಲ. ಆದರೆ ಶಾಸಕ ಅಪ್ಪಸ್ವಾಮಿರೆಡ್ಡಿ, ಶ್ರೀರಾಮರೆಡ್ಡಿ 3 ವರ್ಷದ ಆಡಳಿತದಲ್ಲಿ ಚಿತ್ರಾವತಿ, ವಂಡಮಾನ್, ದೇವಿಕುಂಟೆ, ಸಿಂಗಪ್ಪಗಾರಿಪಲ್ಲಿ, ಗುಮ್ಮನಾಯಕನಪಾಳ್ಯ, ತುಂಗೇಟಿದಿನ್ನೆಗೆ ಸೇರಿದಂತೆ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರಿಗೆ ಚಿತ್ರಾವತಿ, ವಂಡಮಾನ್, ಗ್ರಾಮಗಳಲ್ಲಿ ಸರ್ಕಾರಿ ಶಾಲೆ, ಹೋಬಳಿಗಳಲ್ಲಿ ಪಿಯು ಕಾಲೇಜು, ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಐಟಿಸಿ, ಉರ್ದು ಪ್ರೌಢಶಾಲೆ ಮಾಡಿದ್ದಾರೆ. ಇದೇ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಆಡಳಿತಕ್ಕೆ ಇರುವ ವ್ಯತ್ಯಾಸ’ ಎಂದರು.
‘ಪಟ್ಟಣದ ಮುಖ್ಯರಸ್ತೆಯನ್ನು ಶ್ರೀರಾಮರೆಡ್ಡಿ ಅಗಲೀಕರಣ ಮಾಡಿಸಿದರು. ಇಲ್ಲಸಲ್ಲದ ಆರೋಪ ಹೊರಿಸಿ ಶ್ರೀರಾಮರೆಡ್ಡಿ ಸೇರಿದಂತೆ ಅಪ್ಪಸ್ವಾಮಿರೆಡ್ಡಿ, ನನ್ನನ್ನು ಜನ ಸೋಲಿಸಿದರು. ಸುಳ್ಳು ಭರವಸೆ ನೀಡಿ ಎಸ್.ಎನ್.ಸುಬ್ಬಾರೆಡ್ಡಿ ಶಾಸಕರಾಗಿದ್ದಾರೆ. 12 ವರ್ಷ ಆಡಳಿತದಲ್ಲಿ ಒಂದೇ ಒಂದು ಶಾಶ್ವತ ಯೋಜನೆ ಮಾಡಿಲ್ಲ’ ಎಂದರು.
ಚಿತ್ರಾವತಿ ಜಲಾಶಯ ಶ್ರೀರಾಮರೆಡ್ಡಿ ಹೋರಾಟದ ಪ್ರತಿಫಲದಿಂದ ಆಗಿದೆ ಎಂದು ಗೊತ್ತು. ಆದರೆ ಇದೀಗ ಶ್ರೀರಾಮರೆಡ್ಡಿ ಹೆಸರು ಜನರಿಂದ ಮರೆಮಾಚಲು, ಸಚಿವರು, ಶಾಸಕರು ಕುತಂತ್ರ ರಾಜಕಾರಣ ಮಾಡಲು ಚಿತ್ರಾವತಿ ಜಲಾಶಯಕ್ಕೆ ಎಂ.ಎಸ್.ಕೃಷ್ಣ ಹೆಸರು ಇಡಲು ಮುಂದಾಗಿದ್ದಾರೆ ಎಂದರು.
ರಾಜ್ಯ ರೈತ ಸಂಘ, ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಬಣದ ಜಿಲ್ಲಾ ಮುಖಂಡ ಎಚ್.ಪಿ.ರಾಮನಾಥ್ ಮಾತನಾಡಿ, ‘ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಕುತಂತ್ರ ರಾಜಕಾರಣ ಮಾಡಲು ಹೊರಟಿದ್ದಾರೆ. ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಜನಪರ ಹೋರಾಟಗಳಿಂದ ಚಿತ್ರಾವತಿ ಜಲಾಶಯ ಆಗಿದೆ. ಕಾಂಗ್ರೆಸ್‌ನ ಯಾವ ಶಾಸಕರು ಇದುವರೆಗೂ ಬಾಗೇಪಲ್ಲಿಯ 126, ಗುಡಿಬಂಡೆ 64 ಗ್ರಾಮಗಳಿಗೆ ನೀರು ಹರಿಸಿಲ್ಲ ಎಂದರು.
ರೈತ ಸಂಘದ ಪುಟ್ಟಣ್ಣಯ್ಯ ಬಣದ ತಾಲ್ಲೂಕು ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ ಮಾತನಾಡಿ, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಎಸ್.ಎಂ.ಕೃಷ್ಣ ಅವರ ಮೇಲೆ ಪ್ರೀತಿ, ಅಭಿಮಾನ ಇದ್ದರೆ ಬೆಂಗಳೂರು, ಮದ್ದೂರು ಕಡೆಗಳಲ್ಲಿ ಹೆಸರಿಡಲಿ. ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ.ಕೃಷ್ಣ ಹೆಸರು ಇಡಲು ಸರ್ಕಾರ ಮುಂದಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.