ADVERTISEMENT

ಶಿಡ್ಲಘಟ್ಟ: ಜೀತ ವಿಮುಕ್ತರಿಂದ ಅನಿರ್ದಿಷ್ಟ ಧರಣಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 14:44 IST
Last Updated 19 ಮಾರ್ಚ್ 2025, 14:44 IST
ಶಿಡ್ಲಘಟ್ಟದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಜೀತ ವಿಮುಕ್ತರ ಅನಿರ್ದಿಷ್ಟ ಧರಣಿಯಲ್ಲಿ ಜೀತ ವಿಮುಕ್ತ ಕರ್ನಾಟಕದ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಮಾತನಾಡಿದರು
ಶಿಡ್ಲಘಟ್ಟದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿರುವ ಜೀತ ವಿಮುಕ್ತರ ಅನಿರ್ದಿಷ್ಟ ಧರಣಿಯಲ್ಲಿ ಜೀತ ವಿಮುಕ್ತ ಕರ್ನಾಟಕದ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಮಾತನಾಡಿದರು   

ಶಿಡ್ಲಘಟ್ಟ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜೀತ ವಿಮುಕ್ತರು, ಜೀತ ವಿಮುಕ್ತ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ತಾಲ್ಲೂಕಿನ ದಿಬ್ಬೂರಹಳ್ಳಿಯಿಂದ ಶಿಡ್ಲಘಟ್ಟ ತಾಲ್ಲೂಕು ಕಚೇರಿವರೆಗೆ ಬುಧವಾರ ಪಾದಯಾತ್ರೆ ನಡೆಸಿದರು. ತಾಲ್ಲೂಕು ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.

ಜೀತ ವಿಮುಕ್ತ ತಾಲ್ಲೂಕು ಸಂಚಾಲಕ ಪಿ.ಶ್ರೀನಿವಾಸ್ ಮಾತನಾಡಿ, ‘ಜೀತ ವಿಮುಕ್ತರಿಗೆ ಭೂಮಿ, ವಸತಿ ಮತ್ತು ಸಮಗ್ರ ಪುನರ್ವಸತಿ ಸವಲತ್ತುಗಳನ್ನು ಕಲ್ಪಿಸಲು ಒತ್ತಾಯಿಸಿ ಅನಿರ್ದಿಷ್ಟ ಧರಣಿ ಆರಂಭಿಸಿದ್ದೇವೆ’ ಎಂದರು.

‘ಜೀತದಿಂದ ಬಿಡುಗಡೆ ಮಾಡಿ ಆದೇಶಿಸಿರುವ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಬಂದು ನಮ್ಮ ಹಕ್ಕೊತ್ತಾಯವನ್ನು ಕೇಳಿಸಿಕೊಂಡು ಪರಿಹಾರ ನೀಡಬೇಕು. ಅದುವರೆಗೂ ನಮ್ಮ ಹೋರಾಟವನ್ನು ಕೈಬಿಡುವ ಪ್ರಶ್ನೆಯೆ ಇಲ್ಲ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ 7,500 ಜನ ಜೀತದಿಂದ ಬಿಡುಗಡೆಗೊಂಡಿದ್ದಾರೆ. ಆದರೆ ಸರ್ಕಾರವು ಇವರಿಗೆ ಇದುವರೆಗೆ ಯಾವುದೇ ಪುನರ್ವಸತಿ ಕಲ್ಪಿಸಿಲ್ಲ’ ಎಂದು ದೂರಿದರು.

‘ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಇದುವರೆಗೂ 432 ಮಂದಿಯನ್ನು ಸರ್ಕಾರವೇ ಜೀತದಿಂದ ಬಿಡುಗಡೆ ಮಾಡಿದೆ. ಇದುವರೆಗೂ ಪಾರ್ಕಸ್ ನಿಧಿ, ಮಾಶಾಸನ ಹೊರತುಪಡಿಸಿ ಕಾನೂನು ಪ್ರಕಾರ ಯಾವುದೇ ಸೌಲಭ್ಯ ಮತ್ತು ಪುನರ್ವಸತಿ ಕಲ್ಪಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜೀತದಿಂದ ವಿಮುಕ್ತರಾದವರಿಗೆ ಕಾನೂನಿನಡಿ ಯಾವುದೆ ಸವಲತ್ತುಗಳನ್ನು ಒದಗಿಸದ ಕಾರಣ ಮತ್ತೆ ಅವರು ಜೀತಕ್ಕೆ ಹೋಗುವಂತಿಲ್ಲ. ಸ್ವಾಭಿಮಾನದ ಬದುಕು ನಡೆಸಲೂ ಆಗದೆ ಅತಂತ್ರ ಸ್ಥಿತಿಯಲ್ಲಿ ಪರದಾಡುವಂತಾಗಿದೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತವು ಜೀತ ವಿಮುಕ್ತರ ಬಗ್ಗೆ ತೋರುವ ಅಸಡ್ಡೆ ಕಾರಣ’ ಎಂದು ದೂರಿದರು.

‘ಜೀತದಿಂದ ಬಿಡುಗಡೆ ಆಗಿರುವವರಿಗೆ ಕನಿಷ್ಠ 2 ಎಕರೆ ಜಮೀನು ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಜೀವಿಕ ಒಕ್ಕೂಟದ ಅಧ್ಯಕ್ಷ ರಾಜ್ಯ ಗೌರವಾಧ್ಯಕ್ಷ ಗೊಲ್ಲಹಳ್ಳಿ ನರಸಿಂಹಪ್ಪ, ತಾಲ್ಲೂಕು ಅಧ್ಯಕ್ಷ ಮುನಿಯಪ್ಪ, ಮುನಿರಾಜು, ಮುನಿಕೃಷ್ಣಪ್ಪ, ಗಂಗಪ್ಪ, ಆಂಜಿನಪ್ಪ, ನಾರಾಯಣಪ್ಪ, ಕೃಷ್ಣಪ್ಪ, ಅನಿಲ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.