ADVERTISEMENT

ಗೋ ಹತ್ಯೆ ನಿಷೇಧ ವಾಪಸ್‌ಗೆ ಆಗ್ರಹ

ರಾಜ್ಯ ಸರ್ಕಾರದ ವಿರುದ್ಧ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 4:14 IST
Last Updated 20 ಡಿಸೆಂಬರ್ 2020, 4:14 IST
ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಚಿಕ್ಕಬಳ್ಳಾಪುರ: ಗೋಹತ್ಯೆ ನಿಷೇಧ ಕಾಯ್ದೆ 2020 ಹಿಂಪಡೆಯುವಂತೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಕಾರ್ಯಕರ್ತರು ಶನಿವಾರ ನಗರದಲ್ಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಬಿಎಸ್ಪಿ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಮುನಿಕೃಷ್ಣಯ್ಯ, ‘ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಕಾಡುತ್ತಿದ್ದರೂ ಅವುಗಳ ಪರಿಹಾರಕ್ಕೆ ಗಮನ ಕೊಡದ ರಾಜ್ಯ ಸರ್ಕಾರ ಈ ಕಾಯ್ದೆಯ ಮೂಲಕ ಜನರ ಆಹಾರದ ಹಕ್ಕು ಕಿತ್ತುಕೊಳ್ಳಲು ಮುಂದಾಗಿದೆ’ ಎಂದು ಆರೋಪಿಸಿದರು.

‘ಅತಿವೃಷ್ಟಿಯಿಂದ ಮನೆ, ಬೆಳೆಗಳನ್ನು ಕಳೆದುಕೊಂಡು ಸಂತ್ರಸ್ತರಾದವರಿಗೆ ಪರಿಹಾರ ಕಲ್ಪಿಸುವ ಕೆಲಸವಾಗಿಲ್ಲ. ಬಗರ್‌ ಹುಕುಂ ಸಾಗುವಳಿ ಅರ್ಜಿಗಳ ವಿಲೇವಾರಿ ಆಗುತ್ತಿಲ್ಲ. ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿ ವೇತನ ತಡೆ ಹಿಡಿಯಲಾಗಿದೆ. ಇಂಧನಗಳ ಬೆಲೆ ಏರಿಕೆಯಿಂದಾಗಿ ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ. ನಿರುದ್ಯೋಗ ಇವು ಯಾವುವೂ ಸರ್ಕಾರಕ್ಕೆ ಗಂಭೀರ ಸಮಸ್ಯೆಗಳು ಎನಿಸದಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ವೇದ ಪುರಾಣಗಳಲ್ಲಿ ಕೂಡ ಗೋಮಾಂಸ ಭಕ್ಷಣೆಯ ಉಲ್ಲೇಖಗಳಿವೆ. ಸ್ವಾಮಿ ವಿವೇಕಾನಂದರು ಸಹ ಗೋಮಾಂಸ ಸೇವನೆ ಬಗ್ಗೆ ಮಾತನಾಡಿದ್ದಾರೆ. ಆದರೆ ಇವತ್ತು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಧರ್ಮಗಳ ಹೆಸರಿನಲ್ಲಿ ಜನರನ್ನು ವಿಭಜಿಸಿ ಮತ ಪಡೆಯುವ ಹುನ್ನಾರದ ಭಾಗವಾಗಿ ಈ ಕಾಯ್ದೆ ಜಾರಿಗೆ ತರಲಾಗುತ್ತಿದೆ’ ಎಂದು ಆರೋಪಿಸಿದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಗುರಯ್ಯ ಮಾತನಾಡಿ, ‘ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ 13 ವರ್ಷದ ಒಳಗಿನ ಹಸು, ಎಮ್ಮೆ, ಕೋಣ ಕೊಂದರೆ 7 ವರ್ಷ ಜೈಲು, ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಗೋವಿನಲ್ಲಿ ಮೂರು ಕೋಟಿ ದೇವತೆಗಳಿದ್ದಾರೆ ಎಂದು ನಂಬಿಸುವವರಿಗೆ 13 ವರ್ಷ ದಾಟಿದ ಗೋವಿನಲ್ಲಿ ಯಾವ ದೇವರೂ ಕಾಣಿಸುತ್ತಿಲ್ಲವೆ’ ಎಂದು ಪ್ರಶ್ನಿಸಿದರು.

‘ಪ್ರಪಂಚದಲ್ಲಿ ದನದ ಮಾಂಸ ರಫ್ತಿನಲ್ಲಿ ಭಾರತ ಇವತ್ತು ಎರಡನೇ ಸ್ಥಾನದಲ್ಲಿದೆ. ಬಿಜೆಪಿ ಮುಖಂಡರ ಒಡೆತನದ ಕಂಪೆನಿಗಳೇ ಹೆಚ್ಚಿನ ಪ್ರಮಾಣದಲ್ಲಿ ಮಾಂಸ ರಫ್ತು ಮಾಡುತ್ತಿವೆ. ವಾರ್ಷಿಕ ಲಕ್ಷಾಂತರ ಕೋಟಿ ವಹಿವಾಟು ನಡೆಯುತ್ತಿದೆ. ಒಂದೊಮ್ಮೆ, ಈ ಕಾಯ್ದೆ ಜಾರಿಗೆ ಬಂದರೆ ಗೋರಕ್ಷಕರ ಹೆಸರಿನಲ್ಲಿ ಅಲ್ಪಸಂಖ್ಯಾತರು, ಶೋಷಿತ ಸಮುದಾಯಗಳ ಮೇಲೆ ಹಲ್ಲೆ ನಡೆಸುವ ಘಟನೆಗಳು ಹೆಚ್ಚಳವಾಗುವ ಅಪಾಯವಿದೆ. ಆದ್ದರಿಂದ, ಸರ್ಕಾರ ಕೂಡಲೇ ಈ ಕಾಯ್ದೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಬಿಎಸ್ಪಿ ರಾಜ್ಯ ಘಟಕದ ಕಾರ್ಯದರ್ಶಿ ಪಿ.ವಿ.ನಾಗಪ್ಪ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಕಾಂತರಾಜು.ಸಿ, ಕೆ.ಮೂರ್ತಿ, ಜಿಲ್ಲಾ ಸಂಯೋಜಕ ಸೋಮಶೇಖರ್, ಪದಾಧಿಕಾರಿಗಳಾದ ಶಿವಾನಂದ್, ಮೂರ್ತಿ, ಸುರೇಶ್, ಫಜ್ರುಲ್ ಷರೀಫ್, ಖಲೀಂ, ಬಾಬು, ನಜ್ರೀನ್ ತಾಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.