ADVERTISEMENT

ಚಿಂತಾಮಣಿ | ಪಿಯು ಕಾಲೇಜುಗಳಿಗೆ ದಾಖಲಾತಿ ಕುಸಿತ

ಗ್ರಾಮೀಣ ಭಾಗದ ಸರ್ಕಾರಿ ಕಾಲೇಜುಗಳು ಮುಚ್ಚುವ ಭೀತಿ

ಎಂ.ರಾಮಕೃಷ್ಣಪ್ಪ
Published 8 ಆಗಸ್ಟ್ 2025, 5:16 IST
Last Updated 8 ಆಗಸ್ಟ್ 2025, 5:16 IST
<div class="paragraphs"><p>ಚಿಂತಾಮಣಿಯ ಬಾಲಕರ ಸರ್ಕಾರಿ ಪಿಯು ಕಾಲೇಜು</p></div>

ಚಿಂತಾಮಣಿಯ ಬಾಲಕರ ಸರ್ಕಾರಿ ಪಿಯು ಕಾಲೇಜು

   

ಚಿಂತಾಮಣಿ: ತಾಲ್ಲೂಕಿನಲ್ಲಿ ಒಟ್ಟು 6 ಸರ್ಕಾರಿ ಪಿಯು ಕಾಲೇಜುಗಳಿವೆ. ಆದರೆ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕುಸಿತಗೊಂಡಿದ್ದು, ಮುಚ್ಚುವ ಭೀತಿ ಎದುರಾಗಿದೆ.

ಐದು ವರ್ಷಗಳ ದಾಖಲಾತಿ ಅವಲೋಕಿಸಿದರೆ, ನಗರ ಕಾಲೇಜುಗಳನ್ನು ಹೊರತುಪಡಿಸಿ, ಗ್ರಾಮೀಣ ಭಾಗದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ದಾಖಲಾತಿ ಸಂಖ್ಯೆ ಒಂದಂಕಿ ಮತ್ತು ಎರಡಂಕಿಗೆ ಕುಸಿದಿದೆ. 

ADVERTISEMENT

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಳಗವಾರ ಪಿಯು ಕಾಲೇಜಿನಲ್ಲಿ ನಾಲ್ವರು, ಮೈಲಾಂಡ್ಲಹಳ್ಳಿಯಲ್ಲಿ 12, ಕೈವಾರದಲ್ಲಿ 14, ಬಟ್ಲಹಳ್ಳಿಯಲ್ಲಿ 26, ನಗರದ ಬಾಲಕರ ಕಾಲೇಜಿನಲ್ಲಿ 66, ಬಾಲಕಿಯರ ಕಾಲೇಜಿನಲ್ಲಿ 182 ವಿದ್ಯಾರ್ಥಿಗಳು ಓದುತ್ತಿದ್ದಾರೆ. 2024–25ನೇ ಸಾಲಿನಲ್ಲಿ ತಳಗವಾರ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಎರಡು ತರಗತಿಗಳಲ್ಲಿ 09, ಕೈವಾರದಲ್ಲಿ 24, ಮೈಲಾಂಡ್ಲಹಳ್ಳಿಯಲ್ಲಿ 27, ಬಟ್ಲಹಳ್ಳಿ ಕಾಲೇಜಿನಲ್ಲಿ 43 ಮಂದಿ ವಿದ್ಯಾರ್ಥಿಗಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ಕಾಲೇಜಿನಲ್ಲಿ ವಾಸ್ತವಾಂಶ ಬೇರೆಯೇ ಇದೆ. ಕೆಲವು ಕಡೆ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಹೆಸರು ತೋರಿಸಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದೇ ಇಲ್ಲ. ವಿದ್ಯಾರ್ಥಿಗಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಸರ್ಕಾರವು ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಜೊತೆಗೆ ಸರ್ಕಾರಿ ಪಿಯು ಕಾಲೇಜುಗಳ ದಾಖಲಾತಿ ಕುಸಿತಕ್ಕೆ ಕಾರಣವೇನು ಎಂಬ ಬಗ್ಗೆಯೂ ಅವಲೋಕಿಸಲಾಗುತ್ತಿದೆ. 

ಗ್ರಾಮೀಣ ಪ್ರದೇಶಗಳಲ್ಲಿನ ಪಿಯು ಕಾಲೇಜುಗಳ ದಾಖಲಾತಿ ಕುಸಿತ ಹೀಗೆ ಮುಂದುವರಿದರೆ, ಎರಡ್ಮೂರು ವರ್ಷಗಳಲ್ಲಿ ಗ್ರಾಮೀಣ ಭಾಗದ ಕಾಲೇಜುಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಲಿದೆ ಎಂದು ಉಪನ್ಯಾಸಕರು ಆತಂಕ ವ್ಯಕ್ತಪಡಿಸುತ್ತಾರೆ. 

ಇದರ ನಡುವೆ, ಖಾಸಗಿ ಕಾಲೇಜುಗಳ ಸಂಖ್ಯೆಯ ಜೊತೆಗೆ ಆ ಕಾಲೇಜುಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಆರು ಸರ್ಕಾರಿ ಕಾಲೇಜುಗಳಿದ್ದರೆ ಸುಮಾರು 30 ಖಾಸಗಿ ಪಿಯು ಕಾಲೇಜುಗಳಿವೆ. ಬಹುತೇಕ ಎಲ್ಲ ಕಾಲೇಜುಗಳಗಳಲ್ಲಿ ಉತ್ತಮ ದಾಖಲಾತಿ ಇದೆ. 

ಸರ್ಕಾರಿ ಕಾಲೇಜುಗಳಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿರುವ ತರಬೇತಿ ಪಡೆದ ಉಪನ್ಯಾಸಕರಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ, ರಜೆ ಸೌಲಭ್ಯ, ಬಡ್ತಿ ಮತ್ತಿತರ ಸೌಲಭ್ಯಗಳನ್ನು ಹೊಂದಿದ್ದಾರೆ. ಆದರೆ ಖಾಸಗಿ ಕಾಲೇಜುಗಳಲ್ಲಿ ತರಬೇತಿ ಪಡೆಯದ ಮತ್ತು ₹10–20 ಸಾವಿರ ವೇತನ ಪಡೆಯುವ ಉಪನ್ಯಾಸಕರಿದ್ದಾರೆ. ಆದಾಗ್ಯೂ, ಸರ್ಕಾರಿ ಕಾಲೇಜುಗಳು ಮುಳುಗುವ ಹಡಗು ಎನ್ನುತ್ತಾರೆ ಕೆಲವು ವಿದ್ಯಾರ್ಥಿಗಳ ಪೋಷಕರು. 

ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ನೀಡಬೇಕಾದ ಪ್ರಾಚಾರ್ಯರು ಮತ್ತು ಉಪನ್ಯಾಸಕರಲ್ಲಿ ಬದ್ಧತೆ ಕೊರತೆ ಇದೆ. ನಿರಾಸಕ್ತಿಯಿಂದ ಮತ್ತು ಜವಾಬ್ದಾರಿ ಮರೆತು ವೈಯುಕ್ತಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಮೇಲ್ವಿಚಾರಣೆ ನಡೆಸಬೇಕಾದ ಉಪನಿರ್ದೇಶಕರು ಸರ್ಕಾರಿ ಕಾಲೇಜುಗಳ ಕಡೆ ಗಮನಹರಿಸದೆ, ಖಾಸಗಿ ಕಾಲೇಜುಗಳ ಕಡೆ ಹೆಚ್ಚಿನ ಒಲವು ತೋರುತ್ತಾರೆ ಎಂದು ಉಪನ್ಯಾಸಕರೊಬ್ಬರು ಹೇಳಿದರು.

ಸರ್ಕಾರ ಮತ್ತು ಜನಪ್ರತಿನಿಧಿಗಳು ಪಿಯು ಕಾಲೇಜುಗಳ ಕಡೆ ಮುಖ ಮಾಡಬೇಕಿದೆ. ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಕೃಪಾಂಕ ನೀಡುವ ವ್ಯವಸ್ಥೆ ಜಾರಿಗೊಳಿಸಿದರೆ ದಾಖಲಾತಿ ಹೆಚ್ಚಿಸಲು ಪೂರಕವಾಗಲಿದೆ ಎಂದು ಶಿಕ್ಷಣ ತಜ್ಞ ನರೇಂದ್ರನಾಥ್ ಸಲಹೆ ನೀಡುತ್ತಾರೆ.

‘ಖಾಸಗಿ ಕಾಲೇಜುಗಳ ವ್ಯಾಮೋಹ’

‘ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಕಾಲೇಜುಗಳಿಗೆ ಸೇರಿಸಲು ಇಚ್ಛಿಸುವುದಿಲ್ಲ. ಬದಲಿಗೆ ಖಾಸಗಿ ಕಾಲೇಜುಗಳಲ್ಲಿ ಉತ್ತಮ ವಿದ್ಯಾಭ್ಯಾಸ ಇರುತ್ತದೆ ಎಂದು ಭಾವಿಸಿ ಅದೇ ಕಾಲೇಜುುಗಳಿಗೆ ಸೇರಿಸುತ್ತಾರೆ. ಆದರೆ, ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯಲು ವಿಫಲವಾಗುವ ವಿದ್ಯಾರ್ಥಿಗಳನ್ನು ನಮ್ಮ ಕಾಲೇಜಿಗೆ ತಂದು ಸೇರಿಸಲಾಗುತ್ತಿದೆ. ಇದರಿಂದ ನಮ್ಮ ಕಾಲೇಜಿನ ಫಲಿತಾಂಶದ ಜೊತೆಗೆ ದಾಖಲಾತಿಯೂ ಕುಸಿತಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರು.

ಕಾಯಂ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಕೊರತೆ ಇದೆ. ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿಸಬೇಕಿದೆ. ಎಲ್ಲಿಯೂ ಸೀಟು ಸಿಗದ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ಬರುತ್ತಾರೆ
ಎಂ.ಮರಿಸ್ವಾಮಿ, ಪಿಯು ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.