ADVERTISEMENT

ತಿಮ್ಮಂಪಲ್ಲಿ ಜನಸ್ಪಂದನಾ ಸಭೆ: ವಿವಿಧ ಕಲ್ಯಾಣ ಯೋಜನೆಗಳ ಆದೇಶ ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:25 IST
Last Updated 11 ಸೆಪ್ಟೆಂಬರ್ 2025, 4:25 IST
ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಂಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಸಭೆಯಲ್ಲಿ ವೃದ್ಧೆಯೊಬ್ಬರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಅಹವಾಲು ಅರ್ಜಿ ಸಲ್ಲಿಸಿದರು 
ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಂಪಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಸಭೆಯಲ್ಲಿ ವೃದ್ಧೆಯೊಬ್ಬರು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಅಹವಾಲು ಅರ್ಜಿ ಸಲ್ಲಿಸಿದರು    

ಗೂಳೂರು (ಬಾಗೇಪಲ್ಲಿ): ತಾಲ್ಲೂಕಿನ ಗೂಳೂರು ಹೋಬಳಿಯ ತಿಮ್ಮಂಪಲ್ಲಿ ಸರ್ಕಾರಿ ಫ್ರೌಢಶಾಲೆ ಆವರಣದಲ್ಲಿ ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಬುಧವಾರ ಸಾರ್ವಜನಿಕ ಕುಂದುಕೊರತೆಗಳ ಜನಸ್ಪಂದನಾ ಸಭೆ ನಡೆಯಿತು.

ಸಭೆಯಲ್ಲಿ ಪೋಡಿ, ಭೂಮಿ ಮಂಜೂರು, ನಿವೇಶನ, ಪಿಂಚಣಿ, ಪಡಿತರ ಚೀಟಿ ಸೇರಿದಂತೆ ವಿವಿಧ ಸೇವೆಗಳಿಗಾಗಿ 100ಕ್ಕೂ ಹೆಚ್ಚು ಅರ್ಜಿಗಳನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿರವರಿಗೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,200 ಮಂದಿಗೆ ಕಂದಾಯ ಇಲಾಖೆಯಿಂದ, ತಾಲ್ಲೂಕು ಪಂಚಾಯಿತಿ ವತಿಯಿಂದ 400 ಮಂದಿ ಫಲಾನುಭವಿಗಳಿಗೆ, ಕೃಷಿ ಇಲಾಖೆಯಿಂದ 35, ತೋಟಗಾರಿಕೆ ಇಲಾಖೆಯಿಂದ 15, ಕೈಗಾರಿಕೆ ಇಲಾಖೆಯಿಂದ 100 ಮಂದಿಗೆ, ಆರೋಗ್ಯ ಇಲಾಖೆಯಿಂದ 100 ಮಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 150 ಮಂದಿ ಹಾಗೂ ಪಶು ಸಂಗೋಪಣಾ ಇಲಾಖೆ ವತಿಯಿಂದ 15 ಮಂದಿ ಅರ್ಹ ಫಲಾನುಭವಿಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಹಶೀಲ್ದಾರ್ ಮನೀಷಾ ಎನ್ ಪತ್ರಿ ಮುಂತಾದ ಅಧಿಕಾರಿಗಳು ಸರ್ಕಾರಿ ಸೌಲಭ್ಯ ಹಾಗೂ ವಿವಿಧ ಕಲ್ಯಾಣ ಯೋಜನೆಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು.

ADVERTISEMENT

ಚಂಚುರಾಯನಪಲ್ಲಿ, ಬೊಮ್ಮಯ್ಯಗಾರಿಪಲ್ಲಿ, ಜಿ ಮದ್ದೇಪಲ್ಲಿ, ಜಿಗಿನಿವಾಂಡ್ಲಪಲ್ಲಿ, ಸಾಕವಾಂಡ್ಲಪಲ್ಲಿ ಮತ್ತು ಮಿಟ್ಟೆವಾಂಡ್ಲಪಲ್ಲಿ,  ಮುಲ್ಲಂಗಚೆಟ್ಲಪಲ್ಲಿ ಹಾಗೂ ಗುಟ್ಟಪಾಳ್ಯ ಮತ್ತು ಮಜರಾ ಗ್ರಾಮದ ಗ್ರಾಮಸ್ಥರಿಗೆ ಸಾರ್ವಜನಿಕ ಸ್ಮಶಾನದ ಜಮೀನು ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ಪಾತಬಾಗೇಪಲ್ಲಿ, ಕೊತ್ತಕೋಟೆ, ತಿಮ್ಮಂಪಲ್ಲಿ ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಿವೇಶನ ರಹಿತರಿಗೆ ನಿವೇಶನ ಹಂಚಲು ಜಮೀನು ಕಾಯ್ದಿರಿಸಿರುವ ಜಮೀನುಗಳ ಬಗ್ಗೆ ತಹಶೀಲ್ದಾರ್ ಮನೀಷಾ ಎನ್.ಪತ್ರಿ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ 400 ಮಂದಿ ವಿಧವಾ, ವೃದ್ಧಾಪ್ಯ ಸೇರಿದಂತೆ ವಿವಿಧ ಪಿಂಚಿಣಿ. 200 ಮಂದಿಗೆ ಫೌತಿ ಖಾತೆ, 140 ದುರಸ್ತಿ ಪೋಡಿ ಪ್ರಕರಣ, ಬಗರ್ ಹುಕುಂ ಸಾಗುವಳಿ ಚೀಟಿ ಹಾಗೂ ಖಾತೆ ಬದಲಾವಣೆ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳ ಆದೇಶ ಪತ್ರಗಳನ್ನು ವಿತರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 50 ಮಂದಿಗೆ ಸೀಮಂತ ಮಾಡಲಾಯಿತು. ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್, ಭಾಗ್ಯಲಕ್ಷ್ಮಿ ಬಾಂಡ್‍ ವಿತರಿಸಲಾಯಿತು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಜಿ ಮದ್ದೇಪಲ್ಲಿ ಪ್ರಾಥಮಿಕ ಕೇಂದ್ರ ಕಟ್ಟಡವನ್ನು ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಚಿನ್ನಕಾಯಲಪಲ್ಲಿದಲ್ಲಿ ವಿದ್ಯುತ್ ಸರಬರಾಜು ಕೇಂದ್ರ ಮಾಡಲಾಗಿದೆ. ಮುಂದಿನ 3 ತಿಂಗಲೊಳಗೆ ವಿದ್ಯುತ್ ವ್ಯತ್ಯಯವಾಗದೆ ಸರಬರಾಜು ಮಾಡುವ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು. ಗಂಟ್ಲಮಲ್ಲಮ್ಮ ಕಣಿವೆಯನ್ನು ₹100 ಕೋಟಿ ವೆಚ್ಚದ ಹಣದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಎತ್ತಿಹೊಳೆಯ ಯೋಜನೆಯಿಂದ ಗೂಳೂರು ಹೋಬಳಿಯ 100 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು ಹಾಗೂ ಅಧಿಕಾರಿಗಳನ್ನು ಪೂರ್ಣಕುಂಭ ಸ್ವಾಗತದಿಂದ ಭರಮಾಡಿಕೊಂಡರು. 

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ವತಿಯಿಂದ ನರೇಗಾ ಯೋಜನೆಗಳ ಬಗ್ಗೆ ಭಿತ್ತಿಪತ್ರ ಪ್ರದರ್ಶನ ಮಾಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ ಅಭಿಯಾನದಲ್ಲಿ ಪೌಷ್ಟಿಕ ಆಹಾರದ ತರಕಾರಿ, ಹಣ್ಣುಗಳು, ಕಾಳುಗಳು, ರೊಟ್ಟಿಗಳು, ರವೆಉಂಡೆ, ಸೊಪ್ಪು, ಮೊಟ್ಟೆ, ಮುದ್ದೆ ಸೇರಿದಂತೆ ಪೌಷ್ಟಿಕ ಪದಾರ್ಥಗಳ ಪ್ರದರ್ಶನ ಗಮನ ಸೆಳೆಯಿತು. ತಿಮ್ಮಂಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಯುವನಿಧಿ ಯೋಜನೆಯ ಭಿತ್ತಿಪತ್ರ ಪ್ರದರ್ಶಿಸಲಾಗಿತ್ತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಅತೀಕ್‍ ಅಹಮದ್, ಕಾರ್ಯನಿರ್ವಹಣಾಧಿಕಾರಿ ಜಿ.ವಿ.ರಮೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಂತಲಕ್ಷ್ಮಿ ನವೀನ್, ರವಣಮ್ಮ, ವೆಂಕಟೇಶ್, ಎಸ್.ಎಸ್.ರಮೇಶಬಾಬು, ಶಂಕರರೆಡ್ಡಿ, ನರೇಂದ್ರಬಾಬು, ಬಿ.ವಿ.ವೆಂಕಟರವಣ, ರಾಜಾರೆಡ್ಡಿ, ಬಾಬುರೆಡ್ಡಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.