ADVERTISEMENT

ಮಾ.15ರವರೆಗೆ ರಾಗಿ ಖರೀದಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 4:07 IST
Last Updated 18 ಫೆಬ್ರುವರಿ 2021, 4:07 IST
ಬಾಗೇಪಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದ ಆಹಾರ ಮಳಿಗೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತಾಲ್ಲೂಕು ಶಿರಸ್ತೇದಾರ್ ಸೂರ್ಯನಾರಾಯಣ ಉದ್ಘಾಟಿಸಿದರು
ಬಾಗೇಪಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದ ಆಹಾರ ಮಳಿಗೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತಾಲ್ಲೂಕು ಶಿರಸ್ತೇದಾರ್ ಸೂರ್ಯನಾರಾಯಣ ಉದ್ಘಾಟಿಸಿದರು   

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ರೈತರು ಬೆಳೆದ ಗುಣಮಟ್ಟದ ರಾಗಿಯನ್ನು ಸರ್ಕಾರವೇ ಖರೀದಿ ಮಾಡಿ ಉತ್ತಮ ಬೆಲೆಯನ್ನು ನೀಡಲಾಗುವುದು. ರಾಗಿಯನ್ನು ಖರೀದಿ ಪ್ರಕ್ರಿಯೆಯನ್ನು ಮಾರ್ಚ್ 15ರವರೆಗೂ ಅವಕಾಶ ಇದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ ನಾಗರಿಕ ಸರಬರಾಜು ನಿಗಮದ ಪರಿವೀಕ್ಷಕ ಮೋಹನ್ ತಿಳಿಸಿದರು.

ಪಟ್ಟಣದ ಹೊರವಲಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಹಾರ ನಾಗರಿಕ ಸರಬರಾಜು ನಿಗಮದ ಪ್ರಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಗಿ ಖರೀದಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯ ರೈತರು ಬೆಳೆದ ಉತ್ತಮ ಗುಣಮಟ್ಟದ ರಾಗಿಯನ್ನು ನೇರವಾಗಿ ನೋಂದಾಯಿತ ರೈತರಿಂದ ಖರೀದಿಸಲು ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಿದೆ. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ತೀರ್ಮಾನದಂತೆ ಸ್ಥಳೀಯ ರೈತರಿಂದ ಉತ್ತಮ ಗುಣಮಟ್ಟದ ರಾಗಿಯನ್ನು ತಾಲ್ಲೂಕುಗಳ ಖರೀದಿ ಕೇಂದ್ರಗಳಲ್ಲಿ ಗುಣಮಟ್ಟ ಪರಿಶೀಲಿಸಿ ನಂತರ ರೈತರಿಂದ ರಾಗಿಯನ್ನು ಖರೀದಿಸಲಾಗುವುದು. ತಾಲ್ಲೂಕಿನಲ್ಲಿ ಈಗಾಗಲೇ ನೋಂದಾಯಿತ ರೈತರಿಂದ ರಾಗಿಯನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ರೈತರು ರಾಗಿ ಮಾರಾಟ ಮಾಡಿದರೆ ಪ್ರತಿ ಕ್ವಿಂಟಾಲ್‌ಗೆ ₹3,295 ಸರ್ಕಾರ ನಿಗದಿಪಡಿಸಿದೆ. ತಾಲ್ಲೂಕಿನಲ್ಲಿ ಈಗಾಗಲೇ 1228 ಮಂದಿ ರೈತರು ನೋಂದಾಯಿಸಿಕೊಂಡಿದ್ದಾರೆ. 26,697 ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿಸಿದರು.

ತಾಲ್ಲೂಕು ಶಿರಸ್ತೇದಾರ್ ಸೂರ್ಯನಾರಾಯಣ ಮಾತನಾಡಿ, ರೈತರು ಬೆಳೆದ ರಾಗಿಯ ಗುಣಮಟ್ಟವನ್ನು ಅಧಿಕಾರಿಗಳು ಪರೀಕ್ಷಿಸಲಿದ್ದಾರೆ. ರಾಗಿಯನ್ನು ರೈತರೇ ನೇರವಾಗಿ ಮಾರಾಟ ಮಾಡಬೇಕು. ಮಧ್ಯವರ್ತಿಗಳಿಗೆ ಖರೀದಿ ಕೇಂದ್ರದಲ್ಲಿ ಅವಕಾಶ ಇಲ್ಲ. ರೈತರಿಗೆ ಹಣವನ್ನು ಕೃಷಿ ಇಲಾಖೆಯಲ್ಲಿ ನೋಂದಾಯಿಸಿಕೊಂಡವರಿಗೆ ನೇರವಾಗಿ ಆರ್‌ಟಿಜಿಎಸ್ ಮೂಲಕ ರೈತರ ಬ್ಯಾಂಕಿನ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸೋಮಶೇಖರರೆಡ್ಡಿ, ತಾಲ್ಲೂಕು ಆಹಾರ ಶಿರಸ್ತೇದಾರ್ ಆರ್.ರಾಜಣ್ಣ, ಕೃಷಿ ಇಲಾಖೆಯ ಅಧಿಕಾರಿ ಶ್ರೀಧರ್, ಸಗಟು ಮಳಿಗೆ ವ್ಯವಸ್ಥಾಪಕ ನಂಜಪ್ಪ, ಸಿಬ್ಬಂದಿ ಮಹಮದ್ ಅಜರುದ್ದೀನ್, ನಾಗರಾಜು, ಎಪಿಎಂಸಿಯ ರಾಮಾಂಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.