ADVERTISEMENT

ಚಿಕ್ಕಬಳ್ಳಾಪುರ: ಭೂತ ಬಂಗಲೆಯಲ್ಲ, ಪಿಡಬ್ಲ್ಯುಡಿ ವಸತಿ ಗೃಹ

ಕೆ.ಎನ್‌.ನರಸಿಂಹಮೂರ್ತಿ
Published 30 ಜೂನ್ 2025, 6:26 IST
Last Updated 30 ಜೂನ್ 2025, 6:26 IST
ಗೌರಿಬಿದನೂರಿನ ಪಿಡಬ್ಲ್ಯು ವಸತಿ ಗೃಹಗಳ ಸ್ಥಿತಿ 
ಗೌರಿಬಿದನೂರಿನ ಪಿಡಬ್ಲ್ಯು ವಸತಿ ಗೃಹಗಳ ಸ್ಥಿತಿ    

ಗೌರಿಬಿದನೂರು: ನಗರದ ಬಿ.ಎಚ್ ರಸ್ತೆಯ ಪ್ರವಾಸಿ ಮಂದಿರ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ‌‌ನಿರ್ಮಿಸಿರುವ ವಸತಿ ಗೃಹಗಳು ಶಿಥಿಲವಾಗಿವೆ. ಪಾಳು ಬೀಳುವ ಹಂತಕ್ಕೆ ತಲುಪಿವೆ. ಹೀಗೆ ಅಧ್ವಾನವಾಗಿರುವ ವಸತಿ ಗೃಹಗಳಲ್ಲಿಯೇ ಕೆಲವು ಸಿಬ್ಬಂದಿ ವಾಸಿಸುತ್ತಿದ್ದಾರೆ.

1969 ರಲ್ಲಿ ಸರ್ಕಾರ ಲೋಕೋಪಯೋಗಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ನಿರ್ಮಾಣ ಮಾಡಿದ ವಸತಿ ಗೃಹಗಳು ಇವು. ಸೂಕ್ತ ನಿರ್ವಹಣೆ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಟ್ಟಿಮುಟ್ಟಾದ ಕಟ್ಟಡಗಳು ಸಹ ನಿರ್ವಹಣೆ ಕೊರತೆಯಿಂದ ಶಿಥಿಲವಾಗಿವೆ. ಸರ್ಕಾರದ ಹಣದಲ್ಲಿ ನಿರ್ಮಿಸಿದ ಈ ಕಟ್ಟಡಗಳು ಪಾಳು ಬಿದ್ದಿವೆ. ಅಕ್ರಮ ಚಟುವಟಿಕೆಗಳ ತಾಣವಾಗಿವೆ. 

ಕಚೇರಿಗಳ ಪಕ್ಕದಲ್ಲೇ ಅಧಿಕಾರಿಗಳು ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಿಸಿದರೆ, ಕೇಂದ್ರ ಸ್ಥಾನದಲ್ಲಿ ವಾಸಿಸುವರು. ಜೊತೆಗೆ ಸಾರ್ವಜನಿಕರಿಗೆ ಸುಲಭವಾಗಿ ದೊರೆಯುತ್ತಾರೆ. ಇದರಿಂದ ಜನ ಸಾಮಾನ್ಯರ ಸರ್ಕಾರಿ ಕೆಲಸ-ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ ಎಂಬ ಉದ್ದೇಶದಿಂದ ಇಲಾಖೆಗಳ ಅಧಿಕಾರಿಗಳಿಗೆ ಸರ್ಕಾರವು ವಸತಿ ಗೃಹಗಳನ್ನು ನಿರ್ಮಿಸುತ್ತದೆ.

ADVERTISEMENT

ಇಲ್ಲಿರುವ ಕೆಲ ಕಟ್ಟಡಗಳಲ್ಲಿ ಕೆಲವು ಅಧಿಕಾರಿಗಳು ವಾಸಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ನೀರು ಬರುವುದಿಲ್ಲ. ಮಳೆ ಬಂದರೆ ಮನೆಗಳು ಸೋರುತ್ತದೆ. ವಸತಿ ಗೃಹಗಳ ಸುತ್ತಮುತ್ತ ಮತ್ತು ಮನೆಗಳ ಮೇಲೆ ಗಿಡಗಳು ಬೆಳೆದಿವೆ. ಹಾವು ಚೇಳುಗಳ ಕಾಟ ಹೆಚ್ಚಾಗಿದೆ. ಮೂಲ ಸೌಕರ್ಯಗಳಿಲ್ಲದ ಕಾರಣ ಹಲವು ಅಧಿಕಾರಿಗಳು ವಸತಿ ಗೃಹಗಳನ್ನು ತೊರೆದು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸುವರು.

ತಾಲ್ಲೂಕಿನಲ್ಲಿ ಅನೇಕ ಸರ್ಕಾರಿ ಕಚೇರಿಗಳು ಸ್ವಂತ ಸ್ಥಳವಿಲ್ಲದೆ, ಬಾಡಿಗೆ ಕಟ್ಟಡಗಳಲ್ಲಿ ಕಚೇರಿಗಳನ್ನು ನಡೆಸುತ್ತಿದ್ದಾರೆ. ಆದರೆ ಇನ್ನು ಕೆಲವು ಇಲಾಖೆಗಳು ನೀಡಿರುವ ಕಟ್ಟಡಗಳನ್ನು ಮತ್ತು ವಸತಿ ಗೃಹಗಳನ್ನು ದಶಕಗಳ ಕಾಲದಿಂದ ಬಳಸದೆ ಮತ್ತು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಕಟ್ಟಡಗಳು ಅವಸಾನದ ಹಂತ ತಲುಪಿವೆ. ಭೂತ ಬಂಗಲೆಗಳಂತೆ ಗೋಚರಿಸುತ್ತವೆ. ಸಾರ್ವಜನಿಕರ ಮೂತ್ರಾಲಯಗಳಾಗಿ ಮಾರ್ಪಟ್ಟಿವೆ. 

ಪಾಳು ಬೀಳುತ್ತಿರುವ ಮನೆಗಳನ್ನು ದುರಸ್ತಿಗೊಳಿಸಬೇಕು ಅಥವಾ ಅದೇ ಜಾಗದಲ್ಲಿ ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಕಟ್ಟಡಗಳನ್ನು ನಿರ್ಮಿಸಿದರೆ, ಅನುಕೂಲ ಆಗುತ್ತದೆ ಎಂದು ಪ್ರಜ್ಞಾವಂತರು ಆಗ್ರಹಿಸುವರು.

ಗೌರಿಬಿದನೂರಿನ ಪಿಡಬ್ಲ್ಯು ವಸತಿ ಗೃಹಗಳ ಸ್ಥಿತಿ 

ಸೌಲಭ್ಯ ಕೊರತೆ; ಸಿಬ್ಬಂದಿ ಹಿಂದೇಟು

ಕಟ್ಟಡಗಳು ತುಂಬಾ ಹಳೆಯದಾಗಿವೆ. ಮೂಲ ಸೌಲಭ್ಯಗಳ ಕೊರತೆಯಿಂದ ಇಂದಿನ ಯುವ ಸಿಬ್ಬಂದಿ ಈ ಕಟ್ಟಡಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಸಿಬ್ಬಂದಿಗೆ ಬಾಡಿಗೆಗೆ ಬರಲು ಸೂಚಿಸಲಾಗಿದೆ.
–ಪ್ರಕಾಶ್, ಎಇಇ ಲೋಕೋಪಯೋಗಿ ಇಲಾಖೆ
ಹೊಸ ಕಟ್ಟಡ ನಿರ್ಮಿಸಿ ಪ್ರತಿ ಅಡಿಗೂ ಚಿನ್ನದ ಬೆಲೆ ಇರುವ ಇಂತಹ ಜಾಗಗಳಲ್ಲಿ ಹಳೆ ಕಟ್ಟಡಗಳನ್ನು ದುರಸ್ತಿಮಾಡಬೇಕು. ಅಥವಾ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಪಾಳು ಬೀಳುವಂತೆ ಮಾಡುವುದು ಸರಿಯಲ್ಲ.
– ಶ್ರೀನಿವಾಸ್, ಸ್ಥಳೀಯ
ಸರ್ಕಾರಿ ಕಚೇರಿಗಳಿಗೆ ನೀಡಿ ಸರ್ಕಾರದ ಅನೇಕ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಅನೇಕ ಸರ್ಕಾರಿ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಪಾಳು ಬೀಳುತ್ತಿವೆ. ಖಾಸಗಿಯವರಿಗೆ ಬಾಡಿಗೆ ನೀಡುವ ಬದಲು ಇಂತಹ ಕಟ್ಟಡಗಳನ್ನು ದುರಸ್ತಿಮಾಡಿಸಿ ಸರ್ಕಾರಿ ಕಚೇರಿಗಳಿಗೆ ನೀಡಿದರೆ ಬಾಡಿಗೆ ನೀಡುವುದು ತಪ್ಪುತ್ತದೆ.
– ಅಭಿಲಾಷ್, ಮಾದನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.