ಚಿಂತಾಮಣಿ: ತಾಲ್ಲೂಕಿನ ಕೆ.ರಾಗುಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೊತೆಗೆ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಶಿಕ್ಷಕ ಅನಿಲ್ ಕುಮಾರ್ ಮಾತನಾಡಿ, ‘ರಸಪ್ರಶ್ನೆ ಸ್ಪರ್ಧೆಯು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಮತ್ತು ಕಲಿಕೆ ಬಲಪಡಿಸಿ ಉತ್ತೇಜಿಸಲು ಉತ್ತಮ ಮಾರ್ಗ’ ಎಂದು ಹೇಳಿದರು.
ಮಾತೃಭಾಷೆಯನ್ನು ಸದೃಢವಾಗಿ ಕಲಿತರೆ ಯಾವ ಭಾಷೆಯನ್ನಾದರೂ ಕಲಿಯಬಹುದು. ಹೆಚ್ಚು ಕನ್ನಡದ ಪುಸ್ತಕಗಳ ಅಧ್ಯಯನದಿಂದ ಇದು ಸಾಧ್ಯವಾಗುತ್ತದೆ. ಹಾಗಾಗಿ ಕನ್ನಡ ಪುಸ್ತಕಗಳನ್ನು ಓದಬೇಕು ಎಂದರು.
ಕಸಾಪ ಕಾರ್ಯದರ್ಶಿ ಕುಂಟಿಗಡ್ಡೆ ಎಂ. ಲಕ್ಷ್ಮಣ್ ಮಾತನಾಡಿ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಭಾಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯಿಂದ ವಿದ್ಯಾರ್ಥಿಗಳಲ್ಲಿರುವ ವೇದಿಕೆ ಭಯ ದೂರವಾಗುತ್ತದೆ. ಸಭಿಕರ ಮುಂದೆ ಧೈರ್ಯವಾಗಿ ನಿಂತು ಮಾತನಾಡುವ ಆತ್ಮವಿಶ್ವಾಸ ಬರುತ್ತದೆ. ಕನ್ನಡ ಭಾಷೆ ಬಗ್ಗೆ ಕೀಳರಿಮೆ ಬೇಡ, ವಯಸ್ಸಿನಲ್ಲಿಯೇ ಕನ್ನಡ ಕಲಿಯಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್, ಕೆ. ರಾಗುಟ್ಟಹಳ್ಳಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ನಾಗರಾಜು, ಶಿಕ್ಷಕ ರಘುನಾಥ ರೆಡ್ಡಿ ,ಸಿ. ಆರ್. ಪಿ ರಾಮಪ್ಪ, ನೂರೂಲ್ಲಾ ಕಾರ್ಯಕ್ರಮ ಕುರಿತು ಮಾತನಾಡಿದರು.
ನಿವೃತ್ತ ಶಿಕ್ಷಕ ವೆಂಕಟರಮಣಪ್ಪ ಮತ್ತು ನೂರುಲ್ಲಾ ಹಾಡಿದ ಕನ್ನಡ ಗೀತೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆ.ಎನ್.ಭವಾನಿ ಪ್ರಥಮ, ಕೆ.ಎನ್.ಶ್ವೇತಾ ದ್ವಿತೀಯ, ಕೆ.ಸಿ.ಶ್ವೇತಾ ತೃತಿಯ ಸ್ಥಾನ ಗಳಿಸಿದರು. ಇತರೆ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಶಿಕ್ಷಕಿ ಹೀನಾ ಕೌಸರ್ ರಸಪ್ರಶ್ನೆ ಸ್ಪರ್ಧೆಯ ಉಸ್ತುವಾರಿ ವಹಿಸಿದ್ದರು.
ಜಿ.ವಿ.ನಾಗವೇಣಿ, ಎಂ. ಹೇಮಾ ಮತ್ತು ಲತಾ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೌಜನ್ಯ ಮತ್ತು ಶಿರೀಷ ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕಿ ಅಕ್ಷಿತ, , ಆರ್.ಮಂಜುನಾಥ್, ಮಂಜುಳಮ್ಮ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.