ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಿಂಗಾರು ಬಿತ್ತನೆಯ ಗುರಿ ಹೆಚ್ಚಿದೆ. 2024ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5,422 ಹೆಕ್ಟೇರ್ ಹಿಂಗಾರು ಬಿತ್ತನೆಯ ಗುರಿ ಹೊಂದಲಾಗಿತ್ತು. ಈ ಬಾರಿ 8,937 ಹೆಕ್ಟೇರ್‌ಗೆ ಹೆಚ್ಚಿದೆ.
5,850 ಹೆಕ್ಟೇರ್ ನೀರಾವರಿ ಜಮೀನು ಮತ್ತು 3087 ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಮಳೆ ಕೊರತೆಯ ಕಾರಣದಿಂದ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಅವಧಿಯಲ್ಲಿ ಬಿತ್ತನೆ ನಿಗದಿತ ಗುರಿ ಮುಟ್ಟಿರಲಿಲ್ಲ. ಮುಂಗಾರು ಅವಧಿಯಲ್ಲಿ ಶೇ 89.95ರಷ್ಟು ಬಿತ್ತನೆಯಾಗಿತ್ತು.
ನೆಲಗಡಲೆ ಮತ್ತು ಮುಸುಕಿನ ಜೋಳವು ಹಿಂಗಾರು ಅವಧಿಯ ಪ್ರಮುಖ ಬೆಳೆ. ಈ ಬಾರಿಯ ಮುಂಗಾರಿನಲ್ಲಿ ನೆಲಗಡಲೆ ಜಿಲ್ಲೆಯಲ್ಲಿ ನೆಲಕಚ್ಚಿತ್ತು. ಈ ಕಾರಣದಿಂದ ಚೇಳೂರು ಮತ್ತು ಬಾಗೇಪಲ್ಲಿ ತಾಲ್ಲೂಕಿನಲ್ಲಿ ವಿಮೆ ಮಾಡಿಸಿದ ಶೇಂಗಾವನ್ನು ಬಿತ್ತದ ರೈತರಿಗೂ ವಿಮೆ ಹಣ ದೊರಕಿಸಿಕೊಡಲಾಗಿದೆ.
2025ರ ಬಿತ್ತನೆ ಗುರಿ ಮತ್ತು ಈ ಹಿಂದಿನ ವರ್ಷಗಳ ಹಿಂಗಾರು ಬಿತ್ತನೆಯ ಗುರಿಗೆ ಹೋಲಿಸಿದರೆ ಈ ಬಾರಿ ಗುರಿ ಹೆಚ್ಚಳವಾಗಿದೆ.
ಗೌರಿಬಿದನೂರು ತಾಲ್ಲೂಕಿನಲ್ಲಿ ಗಣನೀಯ ಹೆಚ್ಚಳ: ಜಿಲ್ಲೆಯಲ್ಲಿ 2,759 ಹೆಕ್ಟೇರ್ ಬಿತ್ತನೆ ಗುರಿಯೊಂದಿಗೆ ಗೌರಿಬಿದನೂರು ತಾಲ್ಲೂಕು ಮೊದಲ ಸ್ಥಾನದಲ್ಲಿ ಇದೆ. ಕಳೆದ ವರ್ಷ ಈ ತಾಲ್ಲೂಕಿನಲ್ಲಿ 996 ಹೆಕ್ಟೇರ್ ಹಿಂಗಾರು ಬಿತ್ತನೆ ಗುರಿ ಹೊಂದಲಾಗಿತ್ತು. ಈ ಬಾರಿ ಮೂರು ಪಟ್ಟು ಗುರಿ ಹೆಚ್ಚಳವಾಗಿದೆ.
ಕೈ ಹಿಡಿಯುವುದೇ ಬಿತ್ತನೆ: ಜಿಲ್ಲೆಯಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಆರಂಭವಾಗಿದೆ. ಪ್ರಸಕ್ತ ವರ್ಷ ಹಿಂಗಾರು ರೈತರ ಕೈ ಹಿಡಿಯುವುದೇ ಎನ್ನುವ ಲೆಕ್ಕಾಚಾರವೂ ಜೋರಾಗಿದೆ.
2023-24ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕೇವಲ ಶೇ 39.93 ರಷ್ಟು ಗುರಿ ಸಾಧನೆ ಆಗಿತ್ತು. ಆ ವರ್ಷ ರೈತರ ಪಾಲಿಗೆ ಮುಂಗಾರಿನಂತೆ ಹಿಂಗಾರು ಮಳೆ ಕೂಡ ಕೈ ಕೊಟ್ಟ ಕಾರಣ ಬಿತ್ತನೆಗೆ ಹಿನ್ನಡೆ ಆಗಿತ್ತು. ಜಿಲ್ಲೆಯಲ್ಲಿ ಹಿಂಗಾರು ಉತ್ತಮ ಮಳೆಯೊಂದಿಗೆ ಆರಂಭವಾಗಿದೆ. ಈ ಕಾರಣದಿಂದ ಬಿತ್ತನೆಯ ಬಗ್ಗೆಯೂ ಕೃಷಿ ಇಲಾಖೆ ಆಶಾಭಾವ ಹೊಂದಿದೆ.
‘ಹಿಂಗಾರಿನಲ್ಲಿ ನೆಲಗಡಲೆ, ಮುಸುಕಿನ ಜೋಳ, ಸೂರ್ಯಕಾಂತಿಯು ಪ್ರಮುಖ ಬೆಳೆಯಾಗಿದೆ. ಹಿಂಗಾರು ಬೆಳೆಗಳಿಗೆ ದೊಡ್ಡ ಮಳೆಯ ಅಗತ್ಯವಿಲ್ಲ. ಸಣ್ಣ ಮಳೆಯಾದರೂ ಸಾಕು. ಇಬ್ಬನಿ ವಾತಾವರಣದಲ್ಲಿಯೇ ಈ ಬೆಳೆಗಳು ಬೆಳೆಯುತ್ತವೆ. ಹಿಂಗಾರು ಬಿತ್ತನೆ ಈ ಬಾರಿ ಉತ್ತಮವಾಗುವ ಲಕ್ಷಣಗಳು ಇವೆ’ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.