ADVERTISEMENT

ಚಿಕ್ಕಬಳ್ಳಾಪುರ | ನೆಲಕ್ಕೊರಗಿದ ರಾಗಿ: ಬೆಳೆ ಮಣ್ಣು ಪಾಲಾಗುವ ಆತಂಕ

ಡಿ.ಜಿ.ಮಲ್ಲಿಕಾರ್ಜುನ
Published 3 ಡಿಸೆಂಬರ್ 2025, 6:44 IST
Last Updated 3 ಡಿಸೆಂಬರ್ 2025, 6:44 IST
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಭಾರ್ಗವ ಅವರ ರಾಗಿ ಬೆಳೆ ಮಳೆಯಿಂದಾಗಿ ನೆಲಕಚ್ಚಿದೆ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಭಾರ್ಗವ ಅವರ ರಾಗಿ ಬೆಳೆ ಮಳೆಯಿಂದಾಗಿ ನೆಲಕಚ್ಚಿದೆ   

ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ದಿತ್ವಾ ಚಂಡಮಾರುತದ ಪರಿಣಾಮದಿಂದ ಅಕಾಲಿಕ ಮಳೆಯಾಗುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಯ್ಲಿಗೆ ಬಂದಿದ್ದ ರಾಗಿ ಬೆಳೆ ನೆಲಕ್ಕೊರಗಿ ಮಣ್ಣು ಪಾಲಾಗುವ ಆತಂಕ ಎದುರಾಗಿದೆ. ಇದರಿಂದಾಗಿ ರೈತರು ಫಸಲು ಇಲ್ಲದೆ, ಕೊಯ್ಲು ಮಾಡಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ದಿತ್ವಾ ಚಂಡಮಾರುತದ ಪರಿಣಾಮ ವಿಪರೀತ ಚಳಿ ಜತೆಗೆ ತುಂತುರು ಮಳೆಯಾಗುತ್ತಿದೆ. ಈಗ ಸುರಿಯುತ್ತಿರುವ ತುಂತುರು ಮಳೆಯಿಂದ ತೆನೆಗಳಲ್ಲಿ ನೀರು ತುಂಬಿಕೊಂಡು ನಿಂತಿದ್ದ ಪೈರೆಲ್ಲ ನೆಲಕ್ಕೊರಗಿದೆ. ಬಂದಿರುವ ರಾಗಿ ಬೆಳೆ, ಕೊಯ್ಲು ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ. ವಿಳಂಬವಾಗಿ ರಾಗಿ ಬಿತ್ತನೆ ಮಾಡಿದ್ದ ರೈತರು ಒಂದೆಡೆ ಫಸಲು ಇಲ್ಲದೆ, ಕೊಯ್ಲು ಮಾಡಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅಷ್ಟೋ ಇಷ್ಟೋ ಬಂದಿದ್ದ ಫಸಲು ಸಹ ಮಣ್ಣು ಪಾಲಾಗುವ ಆತಂಕ ಎದುರಾಗಿದೆ.

ತಾಲ್ಲೂಕಿನಲ್ಲಿ ಇದುವರೆಗೂ 12,256 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಕೊಯ್ಲು ಆಗದಿರುವೆಡೆ ಚಂಡಮಾರುತದ ಹೊಡೆತ ಕಾಣುತ್ತಿದೆ. ಈಗ ಮಳೆ ಬಿದ್ದಿರುವುದರಿಂದ ರಾಗಿ ಬೆಳೆ ನೆಲಕ್ಕೊರಗಿದ್ದು ಕೊಯ್ಲು ಮಾಡುವುದು ಕಷ್ಟವಾಗಿದೆ. ಇದೇ ರೀತಿ ಇನ್ನೂ ಐದಾರು ದಿನ ದಿತ್ವಾ ಚಂಡಮಾರುತದ ಪರಿಣಾಮ ಮಳೆ ಸುರಿದರೆ ತೆನೆಗಳಲ್ಲೇ ರಾಗಿ ಮೊಳಕೆಯೊಡೆಯುವ ಅಪಾಯವೂ ಇದೆ.

ADVERTISEMENT

ಎರಡು ಎಕರೆಯಲ್ಲಿ ರಾಗಿ ಬಿತ್ತಿದ್ದೆ. ಇಳುವರಿ ಚೆನ್ನಾಗಿತ್ತು. ಆದರೆ ಈ ಚಂಡಮಾರುತದಿಂದಾಗಿ ಬಿದ್ದ ಮಳೆಗೆ ಬೆಳೆಯೆಲ್ಲಾ ನೆಲಕಚ್ಚಿದೆ. ರಾಗಿಯೂ ಹೋಯಿತು, ಮಣ್ಣು ಮೆತ್ತಿರುವುದರಿಂದ, ವಾಸನೆ ಬರುವುದರಿಂದ ಹುಲ್ಲು ಮೇವಿಗೂ ಆಗುವುದಿಲ್ಲ. ಪರಿಶ್ರಮವೆಲ್ಲಾ ವ್ಯರ್ಥವಾಗಿದೆ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ರಾಗಿ ಬೆಳೆಗಾರ ಭಾರ್ಗವ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.