ADVERTISEMENT

ದ್ರಾಕ್ಷಿ ತೋಟ ನಾಶ: ನಂಜೇಗೌಡರು ಕಂಗಾಲು

​ಪ್ರಜಾವಾಣಿ ವಾರ್ತೆ
Published 15 ಮೇ 2022, 15:44 IST
Last Updated 15 ಮೇ 2022, 15:44 IST
ನಾಶವಾಗಿರುವ ತೋಟದೊಂದಿಗೆ ನಂಜೇಗೌಡ
ನಾಶವಾಗಿರುವ ತೋಟದೊಂದಿಗೆ ನಂಜೇಗೌಡ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅರಸನಹಳ್ಳಿಯ ರೈತ ನಂಜೇಗೌಡರು ಭಾನುವಾರದ ಮಳೆ, ಗಾಳಿಗೆ ಎರಡು ಎಕರೆಯ ದ್ರಾಕ್ಷಿ ತೋಟ ಕಳೆದುಕೊಂಡು ಕಂಗಾಲಾಗಿದ್ದಾರೆ. ಅವರ ತೋಟದಲ್ಲಿ ದ್ರಾಕ್ಷಿಯ ಗೊಂಚಲು ತೂಗುತ್ತಿತ್ತು. ಇನ್ನೇನು ಒಂದು ವಾರದಲ್ಲಿ ದ್ರಾಕ್ಷಿ ಕಟಾವಿಗೆ ಬರುತ್ತಿತ್ತು. ಸದ್ಯದ ಮಾರುಕಟ್ಟೆಯ ದರದಲ್ಲಿ ಈ ದ್ರಾಕ್ಷಿಯ ಬೆಲೆ ₹ 10 ಲಕ್ಷದಿಂದ ₹ 15 ಲಕ್ಷ ಆಗುತ್ತಿತ್ತು.

ಭಾನುವಾರ ಬೆಳಿಗ್ಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಳೆ ಸುರಿಯಿತು. ಮಳೆಗಿಂತಲೂ ಗಾಳಿ ಬಿರುಸು ಪಡೆದಿತ್ತು. ಈ ಕಾರಣದಿಂದ ನಂಜೇಗೌಡರ ದ್ರಾಕ್ಷಿ ತೋಟ ನೆಲಕಚ್ಚಿದೆ. ಇದು ಐದು ವರ್ಷಗಳ ತೋಟವಾಗಿತ್ತು.ಈ ಬಾರಿ ಸುಮಾರು 40ರಿಂದ 50 ಟನ್ ದ್ರಾಕ್ಷಿಯನ್ನು ನಂಜೇಗೌಡರು ನಿರೀಕ್ಷಿಸಿದ್ದರು.

‘ಬೆಳಿಗ್ಗೆ 5ರ ಗಂಟೆಯ ಸುಮಾರಿನಲ್ಲಿ ಮಳೆ ಬಿದ್ದಿತ್ತು. ನಂತರ 7ರ ಸುಮಾರಿನಲ್ಲಿ ಜೋರಾಗಿ ಗಾಳಿ ಬೀಸಿತು. ಗಾಳಿಯ ರಭಸಕ್ಕೆ ಒಂದು ಕಲ್ಲು ಕಂಬ ಮುರಿಯಿತು. ನಂತರ ಇಡೀ ತೋಟ ನೆಲಕಚ್ಚಿತ್ತು’ ಎಂದು ನಂಜೇಗೌಡರ ಸಹೋದರ ರಮೇಶ್ ತಿಳಿಸಿದರು.

ADVERTISEMENT

‘ಮತ್ತೆ ಇಂತಹ ತೋಟ ನಿರ್ಮಿಸಬೇಕು ಎಂದರೆ ₹ 40ರಿಂದ 50 ಲಕ್ಷ ಬೇಕು. ಕಲ್ಲು ಕಂಬಗಳು, ಕಬ್ಬಿಣದ ಪೈಪ್‌ಗಳು, ಚಪ್ಪರ ನಿರ್ಮಿಸಲು ಹೆಚ್ಚು ಹಣ ಅಗತ್ಯವಿದೆ. ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ ಎನ್ನುವಂತಾಗಿದೆ. ಮತ್ತೆ ಈಗ ಹೊಸ ತೋಟ ಮಾಡಿ ಅದು ಫಸಲಿಗೆ ಬರಬೇಕು ಎಂದರೆ ಮೂರು ವರ್ಷಬೇಕಾಗುತ್ತದೆ’ ಎಂದರು.

ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.