ADVERTISEMENT

ಮೌಢ್ಯದ ವಿರುದ್ಧ ಅರಿವು ಮೂಡಿಸಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:13 IST
Last Updated 18 ಜನವರಿ 2021, 2:13 IST
ಗೌರಿಬಿದನೂರಿನಲ್ಲಿ ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ಮಾತನಾಡಿದರು
ಗೌರಿಬಿದನೂರಿನಲ್ಲಿ ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ಮಾತನಾಡಿದರು   

ಗೌರಿಬಿದನೂರು: ‘ಸಮಾಜದಲ್ಲಿ ನಾಗರಿಕತೆ ‌ಮತ್ತು ಸಂಸ್ಕೃತಿಯ ಜತೆಗೆ ಆಧುನಿಕತೆ ಅಳವಡಿಸಿಕೊಂಡು ಬದುಕುವ ಮೂಲಕ ಮೌಢ್ಯದ ವಿರುದ್ಧ ಧ್ವನಿಯಾಗಿ ಎಲ್ಲರೂ ಕಾರ್ಯ ನಿರ್ವಹಿಸಬೇಕಾಗಿದೆ’ ಎಂದು ಜಿ.ಪಂ. ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ
ತಿಳಿಸಿದರು.

ತಾಲ್ಲೂಕಿನ ಹುಲಿಕುಂಟೆಯಲ್ಲಿ ಶುಕ್ರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಗೊಲ್ಲ, ಅಲೆಮಾರಿ‌ ಮತ್ತು ಅರೆಅಲೆಮಾರಿ ಜನಾಂಗದವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು.

‘ಗ್ರಾಮೀಣ ಭಾಗದ ಬುಡಕಟ್ಟು ಜನತೆ ತಮ್ಮ ಕುಲಕಸುಬುಗಳ ಜತೆಗೆ ಸಮಾಜದ ಮುಖ್ಯ‌ವಾಹಿನಿಗೆ ಬರಲು ಸಹಕಾರಿಯಾಗುವಂತಹ ವಿವಿಧ ಕ್ಷೇತ್ರಗಳ‌ಲ್ಲಿ ಕಾರ್ಯ ನಿರ್ವಹಿಸುವಲ್ಲಿ ಮುಂದಾಗಬೇಕಾಗಿದೆ. ಆಚಾರ ವಿಚಾರದ ಜತೆಗೆ ಅನಾದಿಕಾಲದಿಂದಲೂ ಬಂದಿರುವ ಮೂಢನಂಬಿಕೆಗಳಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಜನರಲ್ಲೂ ಜಾಗೃತಿ ‌ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಈ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಸೌಲಭ್ಯ ನೀಡಿದ್ದು ಅವುಗಳ ಸದ್ಬಳಕೆಗೆ ಅಧಿಕಾರಿಗಳು ಹೆಚ್ಚಿನ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.

ADVERTISEMENT

ಶಾಸಕ ಎನ್‌.ಎಚ್. ಶಿವಶಂಕರರೆಡ್ಡಿ ಮಾತನಾಡಿ, ‘ಸರ್ಕಾರವು ದಶಕಗಳ‌ ಹಿಂದೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಗೊಲ್ಲ, ಅಲೆಮಾರಿ ‌ಮತ್ತು ಅರೆಅಲೆಮಾರಿ ಸಮುದಾಯದ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಮುದಾಯವು ವಾಸಿಸುವ ಪ್ರದೇಶಗಳಲ್ಲಿ‌ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಅನುದಾನದ ಮೂಲಕ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿದೆ’ ಎಂದರು.

ಜನಾಂಗದಲ್ಲಿನ ಯುವಕರು ಎಚ್ಚೆತ್ತು ಮೌಢ್ಯದ ವಿರುದ್ಧ ಹೋರಾಟ ನಡೆಸಿ ಆಧುನಿಕತೆಗೆ ಅನುಗುಣವಾಗಿ ಬದುಕುವ ಜತೆಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ‌ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜ ನಾಯಕ್ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ‌ನೀಡಿದರು.

ಜಿ.ಪಂ. ಸದಸ್ಯೆ ಎ. ಅರುಂಧತಿ, ಮುಖಂಡರಾದ ಕೆ.ಎನ್. ಕೇಶವರೆಡ್ಡಿ, ಬಿ.ಪಿ. ಅಶ್ವತ್ಥನಾರಾಯಣಗೌಡ, ನಾರೆಪ್ಪರೆಡ್ಡಿ, ಅಶ್ವತ್ಥ ರೆಡ್ಡಿ, ಜಯಮ್ಮ, ಅಶ್ವತ್ಥನಾರಾಯಣ, ಬಾಲಕೃಷ್ಣ, ಪ್ರೇಮಾ, ಇಲಾಖೆಯ ಅಧಿಕಾರಿಗಳಾದ ನಾಗರಾಜನಾಯಕ್, ಸೋಮಶೇಖರ್, ವಸಂತಕುಮಾರಿ, ಶಾಂತಕುಮಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.