ADVERTISEMENT

ಕಾಂಗ್ರೆಸ್‌ ತೆಕ್ಕೆಗೆ ರಮಾಪುರ ಡೇರಿ

ಅಧ್ಯಕ್ಷರಾಗಿ ಶಿವಣ್ಣ, ಉ‍ಪಾಧ್ಯಕ್ಷರಾಗಿ ಲಕ್ಷ್ಮಮ್ಮ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 6:02 IST
Last Updated 12 ಜೂನ್ 2022, 6:02 IST
ರಮಾಪುರ ಗ್ರಾಮದ ಡೇರಿಯ ನೂತನ ಅಧ್ಯಕ್ಷ ಆರ್.ಎನ್. ಶಿವಣ್ಣ ಮತ್ತು ಉಪಾಧ್ಯಕ್ಷೆ ಲಕ್ಷ್ಮಮ್ಮ ಅವರನ್ನು ಮುಖಂಡರು ಅಭಿನಂದಿಸಿದರು
ರಮಾಪುರ ಗ್ರಾಮದ ಡೇರಿಯ ನೂತನ ಅಧ್ಯಕ್ಷ ಆರ್.ಎನ್. ಶಿವಣ್ಣ ಮತ್ತು ಉಪಾಧ್ಯಕ್ಷೆ ಲಕ್ಷ್ಮಮ್ಮ ಅವರನ್ನು ಮುಖಂಡರು ಅಭಿನಂದಿಸಿದರು   

ಗೌರಿಬಿದನೂರು: ತಾಲ್ಲೂಕಿನ ರಮಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಆರ್.ಎನ್. ಶಿವಣ್ಣ ಮತ್ತು ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿ, ಸಂಘದಲ್ಲಿನ ಎಲ್ಲಾ ನಿರ್ದೇಶಕರ ಸಹಕಾರದಿಂದ ಡೇರಿಯು ಕಾಂಗ್ರೆಸ್ ಪಾಲಾಗಿದೆ. ಸಂಘದ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ. ಯಾವುದೇ ಕಾರಣಕ್ಕೂ ಸಂಘದಲ್ಲಿ ಸ್ಥಳೀಯ ರಾಜಕಾರಣದ ನಂಟು ಬೆಳೆಸದಂತೆ ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಹಣ ನೀಡುವ‌ ಇಚ್ಛಾಶಕ್ತಿ ಕಾರ್ಯದರ್ಶಿಗಳಿಗೆ ಇರಬೇಕಿದೆ ಎಂದರು.

ಹಾಲು ಉತ್ಪಾದಕರ ಹಿತಕ್ಕಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ‌ ದೊರೆಯಲಿದೆ. ಅದನ್ನು ರೈತರು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಮುಖಂಡ ಎಚ್.ಎನ್. ಪ್ರಕಾಶರೆಡ್ಡಿ ಮಾತನಾಡಿ, ಸ್ಥಳೀಯ ಸಹಕಾರ ಸಂಘದ ಸಾಧಕ– ಬಾಧಕಗಳಿಗೆ ಕೇವಲ ಅಧ್ಯಕ್ಷ ಮತ್ತು ಉಪಾಧ್ಯಕ್ಷರೇ ಹೊಣೆಗಾರರು ಎನ್ನಬಾರದು. ಇದರ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಸಹಕಾರ ಅಗತ್ಯವಿದೆ. ರೈತರು ಕೃಷಿ ಚಟುವಟಿಕೆಯ ಜೊತೆಗೆ ಜಾನುವಾರು ಸಾಕಾಣಿಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.

ADVERTISEMENT

ಸಂಘದ ನೂತನ ಅಧ್ಯಕ್ಷ ಆರ್.ಎನ್. ಶಿವಣ್ಣ ಮಾತನಾಡಿ, ಸ್ಥಳೀಯ ಹಾಲಿನ ಡೇರಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ. ನಮ್ಮ ಅವಧಿಯಲ್ಲಿ ಸಂಘವನ್ನು ಮಾದರಿಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

ನಿರ್ದೇಶಕರಾದ ಅಶ್ವತ್ಥಪ್ಪ, ಕೃಷ್ಣ, ಪಾಪಯ್ಯ, ದೇವರಾಜು, ಲೋಕೇಶ್, ನರಸಪ್ಪ, ಲಕ್ಷ್ಮಮ್ಮ, ನಾಗರಾಜ್, ರಾಮಾಂಜಿನಪ್ಪ, ಗಂಗಮ್ಮ, ಅಶ್ವತ್ಥಪ್ಪ, ಮುಖಂಡರಾದ ನಾರಾಯಣಪ್ಪ, ಮೋಹನ್‍ಕುಮಾರ್, ಆರ್.ಸಿ. ನಂಜಪ್ಪ, ಅಶ್ವತ್ಥಪ್ಪ, ಉಗ್ರಪ್ಪ, ಶಿವಕುಮಾರ್, ರವಿಕುಮಾರ್, ಬಾಬುರೆಡ್ಡಿ, ಸೇಟು, ಕಾರ್ಯದರ್ಶಿ ಆನಂದ್ ಇದ್ದರು. ಚುನಾವಣಾಧಿಕಾರಿಯಾಗಿ ಟಿ. ಜಯರಾಮಯ್ಯ ಕರ್ತವ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.