
ಶಿಡ್ಲಘಟ್ಟ: ‘ನಮ್ಮ ಮನೆಗೆ ಕುಡಿಯುವ ನೀರು ಬಂದು ಒಂದು ವರ್ಷದ ಮೇಲಾಗಿದೆ. ಮೂರು ತಿಂಗಳ ಹಿಂದೆ ನಡೆದ ಚರಂಡಿ ಕಾಮಗಾರಿಯಿಂದ ಉಪ್ಪು ನೀರು ಹರಿಸುವ ಪೈಪ್‌ಲೈನ್ ಹಾಳಾಗಿದೆ. ಉಪ್ಪು ನೀರೂ ಬರುತ್ತಿಲ್ಲ. ಮನೆಗೆ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದೇವೆ’– ಇದು ಶಿಡ್ಲಘಟ್ಟದ 15ನೇ ವಾರ್ಡ್ ನಿವಾಸಿ ಷೇಕ್ ಹುಸೇನ್ ನುಡಿ.
ಷೇಕ್ ಹುಸೇನ್ ಮಾತು ಶಿಡ್ಲಘಟ್ಟ ನಗರದ ನೀರು ಸರಬರಾಜಿನ ಅವ್ಯವಸ್ಥೆ, ನೀರಿನ ಕೊರತೆ, ಸಮಸ್ಯೆಯ ಅಗಾಧತೆಯನ್ನು ಪ್ರತಿಧ್ವನಿಸುತ್ತದೆ. ಈಗ ಈ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ ರಾಮಸಮುದ್ರದಿಂದ ಶಿಡ್ಲಘಟ್ಟಕ್ಕೆ ನೀರು ತರುವ ಯೋಜನೆಗೆ ನಿಶಾನೆ ದೊರೆತಿದೆ.
ಈ ಯೋಜನೆಯ ಬಗ್ಗೆ ಶಿಡ್ಲಘಟ್ಟ ನಾಗರಿಕರು ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ. ನಗರದ ನೀರಿನ ದಾಹ ನೀಗುತ್ತದೆ ಎನ್ನುವ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ.
ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರ ಮತ್ತು ಈ ಮಾರ್ಗದ 13 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ. ₹ 96 ಕೋಟಿ ವೆಚ್ಚದ ಯೋಜನೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಎರಡು ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಈ ಮೂಲಕ ವೇಗವಾಗಿ ಬೆಳೆಯುತ್ತಿರುವ ಶಿಡ್ಲಘಟ್ಟ ನಗರಕ್ಕೆ ಭವಿಷ್ಯದಲ್ಲಿಯೂ ರಾಮಸಮುದ್ರದ ಕೆರೆ ನೀರು ಆಸರೆ ಆಗುತ್ತದೆ.
55 ಎಲ್‌ಪಿಸಿಡಿ ನೀರು: ಪ್ರಸ್ತುತ ಕೊಳವೆಬಾವಿಗಳಿಂದ ಮಾತ್ರ ನಗರದ ಜನರಿಗೆ ನೀರು ಪೂರೈಸಲಾಗುತ್ತಿದೆ. ಪ್ರತಿ ದಿನ 55 ಎಲ್‌ಪಿಸಿಡಿ ನೀರು ಸರಬರಾಜು ಮಾಡಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 127 ಕೊಳವೆ ಬಾವಿಗಳಿವೆ. ಅವುಗಳಲ್ಲಿ 96 ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿದೆ. ನಗರಸಭೆಯ 31 ವಾರ್ಡುಗಳಲ್ಲಿನ 12,850 ಮನೆಗಳಿಗೆ ಸುಮಾರು 15 ರಿಂದ 20 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಇದೀಗ ಬೃಹತ್ ಯೋಜನೆ ಪ್ರಾರಂಭವಾಗುತ್ತಿದೆ.
ಯೋಜನೆಯ ವಿವರ: ರಾಮಸಮುದ್ರ ಕೆರೆಯಲ್ಲಿ 10 x 12 ಮೀ ಹೌಸಿಂಗ್ ಚೇಂಬರ್ ನಿರ್ಮಿಸಿ ಅಲ್ಲಿಂದ ನೀರು ಪಂಪ್ ಮಾಡಲಾಗುತ್ತದೆ. ಅಜ್ಜಕದಿರೇನಹಳ್ಳಿಯ ಬಳಿ 10 ಎಂಎಲ್‌ಡಿ ಜಲಶುದ್ಧೀಕರಣ ಘಟಕ ಸ್ಥಾಪಿಸಿ ನೀರು ಶುದ್ಧೀಕರಿಸಲಾಗುತ್ತದೆ. ರಾಮಸಮುದ್ರ ಕೆರೆಯಿಂದ ಜಲ ಶುದ್ಧೀಕರಣ ಘಟಕಕ್ಕೆ ಕಚ್ಚಾ ನೀರು ಏರು ಕೊಳವೆ ಅಳವಡಿಸಲಾಗುತ್ತದೆ.
ನಗರದಲ್ಲಿ ಈಗಾಗಲೇ ಇರುವ ಐದು ಜಲಸಂಗ್ರಹಾಗಾರಗಳ ಜೊತೆಗೆ ಹೊಸದಾಗಿ 15 ಲಕ್ಷ ಲೀಟರ್ ಸಾಮರ್ಥ್ಯದ ಒಂದು, 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಜಲಸಂಗ್ರಹಗಾರಗಳನ್ನು ನಿರ್ಮಿಸಲಾಗುವುದು.
ಜಲ ಶುದ್ಧೀಕರಣ ಘಟಕದಿಂದ ನಗರದ ಜಲಸಂಗ್ರಹಗಾರಗಳವರೆಗೆ 14.88 ಕಿ.ಮೀ. ದೂರ ವಿವಿಧ ವ್ಯಾಸದ ಡಿ.ಐ ಫೀಡರ ಕೊಳವೆಗಳನ್ನು ಅಳವಡಿಸಳಾಗುತ್ತದೆ. ನಗರದಾದ್ಯಂತ ನೀರು ಸರಬರಾಜಿಗೆ 99.18 ಕಿ.ಮೀ ವಿವಿದ ವ್ಯಾಸದ ಎಚ್.ಡಿ.ಪಿ.ಇ, ಡಿ.ಐ. ವಿತರಣಾ ಜಾಲ ಅಳವಡಿಸುವರು. ನಗರದ ಐದು ಜಲಸಂಗ್ರಹಾಗಾರಗಳನ್ನು ನವೀಕರಣಗೊಳಿಸಲಾಗುತ್ತದೆ. ಇವುಗಳನ್ನೆಲ್ಲಾ ನಿರ್ವಹಣೆ ಮಾಡಲು ಆಧುನಿಕ ಆನ್‌ಲೈನ್ ಮಾನಿಟರಿಂಗ್ ಸಿಸ್ಟಮ್ ಅಳವಡಿಸಲಾಗುತ್ತದೆ.
ಶಿಡ್ಲಘಟ್ಟ ನಗರದಲ್ಲಿ 2011ನೇ ಜನಗಣತಿ ಪ್ರಕಾರ 51,159 ಜನಸಂಖ್ಯೆ ಇದೆ. 2025ಕ್ಕೆ 66,300 ಜನರು ವಾಸಿಸುತ್ತಿದ್ದಾರೆ. ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ದಿನಂಪ್ರತಿ ನಗರದ ನೀರಿನ ಬೇಡಿಕೆಯು 11.20 ಎಂಎಲ್‌ಡಿ ಆಗಿದೆ. ನಗರದ ಜನಸಂಖ್ಯೆಯು 2040ನೇ ಸಾಲಿಗೆ 86,700 ಮತ್ತು 2055 ನೇ ಸಾಲಿಗೆ 1,12,500 ಆಗುತ್ತದೆ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.