ADVERTISEMENT

ಅಪರೂಪ ಕಲಾವಿದರು ಗೊರವಯ್ಯ...

ಗೊರವರು ಮೈಲಾರಲಿಂಗನ ಪರಮ ಭಕ್ತರು

ಡಿ.ಜಿ.ಮಲ್ಲಿಕಾರ್ಜುನ
Published 14 ಡಿಸೆಂಬರ್ 2023, 4:28 IST
Last Updated 14 ಡಿಸೆಂಬರ್ 2023, 4:28 IST
ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರಕ್ಕೆ ಬಂದಿದ್ದ ಗೊರವಯ್ಯ
ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರಕ್ಕೆ ಬಂದಿದ್ದ ಗೊರವಯ್ಯ   

ಶಿಡ್ಲಘಟ್ಟ: ಜಾನಪದ ಹಿನ್ನೆಲೆಯ ಗೊರವರು ಹಿಂದೆ ಹಳ್ಳಿ ಹಾಗೂ ನಗರ ಪ್ರದೇಶದಲ್ಲಿ ಕಂಡು ಬರುತ್ತಿದ್ದರು. ಮನೆ ಮನೆಗಳಿಗೆ ತೆರಳಿ ಭಿಕ್ಷಾಟನೆ ಮಾಡುತ್ತಾ, ಜಾನಪದ ವೈದ್ಯ ಮಾಡುತ್ತಿದ್ದವರು ಈಚೆಗೆ ಅಪರೂಪವಾಗಿದ್ದಾರೆ.

ಹನುನಂತಪುರ ಗ್ರಾಮಕ್ಕೆ ವರ್ಷಗಳ ನಂತರ ಗೊರವಯ್ಯ ಬಂದಾಗ ಮಕ್ಕಳು ಅವರ ವೇಷಭೂಷಣ ಕಂಡು ಸಂಭ್ರಮಿಸಿದರೆ, ಗ್ರಾಮದವರು ಅಪರೂಪದ ಅತಿಥಿ ಬಂದಂತೆ ಭಾವಿಸಿ ದವಸ–ಧಾನ್ಯ ಗೌರವದಿಂದ ನೀಡಿದರು.

ಧಾರ್ಮಿಕ ಜಾನಪದ ಹಿನ್ನೆಲೆಯಿಂದ ಗೊರವ ಸಂಪ್ರದಾಯ ವೃತ್ತಿ ಕಲೆಯಾಗಿ ಬೆಳೆದಿದೆ. ಗೊರವರು ಮೈಲಾರಲಿಂಗನ ಪರಮ ಭಕ್ತರು. ಈ ಸಾಂಪ್ರದಾಯಿಕ ಕಲೆ ಕುರುಬ ಜನಾಂಗದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದೆ. ಕುರುಬ ದ್ಯಾವರಗಳಲ್ಲಿ ಗೌರವ ಸ್ವೀಕರಿಸುವ ಇವರಿಗೆ ಗುರುಸ್ಥಾನವಿದೆ. ಹಾಗಾಗಿ ಇವರನ್ನು ಮಂಗಳ ಕಾರ್ಯಗಳಲ್ಲಿ ಕರೆಸಿ ಗೌರವಿಸುವ ವಾಡಿಕೆ ಇದೆ.

ADVERTISEMENT

ಇವರದ್ದು ಭೈರವ ಕುಣಿತ. ಶಿವನ ಗಣಗಳಲ್ಲಿ ಇವರೂ ಒಬ್ಬರು ಅಥವಾ ಪರಶಿವನ ರೂಪವೇ ಇಂದಿನ ಗೊರವರು ಎಂಬ ನಂಬಿಕೆಯಿದೆ. ಗೊರವರಲ್ಲಿ ಹಲವು ದೇವರುಗಳ ಒಕ್ಕಲುಗಳಿದ್ದರೂ, ವೇಷ ಭೂಷಣ ಸಂಪ್ರದಾಯಗಳಲ್ಲಿ ಏಕತೆಯಿದೆ. ‘ಗೊರವ ದೀಕ್ಷೆ‘ ಸಂಪ್ರದಾಯಬದ್ಧವಾಗಿ ಹಿರಿಯರ ಸಮ್ಮುಖದಲ್ಲಿ ನಡೆಯುವ ಧಾರ್ಮಿಕ ಕ್ರಿಯೆ.

ಕಂಬಳಿ ಕೋರೆ ನಿಲುವಂಗಿ, ಕೊರಳಲ್ಲಿ ಭಂಡಾರ ಇಡುವ ಹುಲಿ ಚರ್ಮದ ಚೀಲ, ಕವಡೆ ಸರ, ಹೆಗಲಲ್ಲಿ ಭಿಕ್ಷಾಪಾತ್ರೆ, ದೋಣಿ, ಕೈಯಲ್ಲಿ ಡಮರುಗ, ಪಿಳ್ಳಂಗೋವಿ, ಕರಡಿ ಕೂದಲಿನ ಕುಲಾವಿ ಮುಂತಾದವು ಇವರ ವೇಷಭೂಷಣ. ಆದರೆ, ಈಗ ಪ್ರಾಣಿಗಳ ಚರ್ಮ ಧರಿಸುವುದು ಅಪರಾಧವೆಂದು ಕೃತಕವಾದದ್ದನ್ನು ಬಳಸುತ್ತಾರೆ.

ಗೃಹಪ್ರವೇಶ ಮುಂತಾದ ಮಂಗಳ ಕಾರ್ಯಗಳಿದ್ದಾಗ ಗೊರವರು ನಡೆಸುವ ಮಣಿಸೇವೆ ಅಥವಾ ಒಗ್ಗಸೇವೆ ಎಂಬ ಕುಣಿತ ಆಕರ್ಷಕವಾಗಿರುತ್ತದೆ. ಡಮರುಗ ಹಿಡಿದು ಶಿವನ ಸ್ತೋತ್ರ ಹೇಳುತ್ತಾ ಐದಾರು ಗೊರವರು ಲಯಬದ್ಧವಾಗಿ ಕುಣಿಯುತ್ತಾರೆ.

ಮೈಲಾರ ಗುಡ್ಡದಲ್ಲಿ ಪ್ರತಿ ಕಾರ್ತಿಕ ಮಾಸದಲ್ಲಿ ನಡೆಯುವ ಜಾತ್ರೆ ಸಂದರ್ಭದಲ್ಲಿ ಮೈಲಾರ ಲಿಂಗನ ಪೂಜಾರಿ ಹೇಳುವ ಕಾರ್ಣಿಕ ಬಗ್ಗೆ ಜನರಲ್ಲಿ ಈಗಲೂ ನಂಬಿಕೆ ಇದೆ.

‘ನಮ್ಮದು ದೊಡ್ಡಬಳ್ಳಾಪುರ ಬಳಿಯ ತೂಬುಗೆರೆ. ಕುಲವೃತ್ತಿ ಬಿಡಬಾರದು ಎಂದು ಒಂದೊಂದು ವರ್ಷ ಒಂದೊಂದು ಭಾಗಕ್ಕೆ ಹೋಗಿ ಭಿಕ್ಷಾಟನೆ ಮಾಡಿ ಬರುತ್ತೇನೆ. ಮಕ್ಕಳು ಚೆನ್ನಾಗಿ ಓದಿದ್ದಾರೆ. ನಮ್ಮದೂ ಕೃಷಿ ಕಾಯಕವಿದೆ‘ ಎಂದು ಹನುಮಂತಪುರದಲ್ಲಿ ಸಿಕ್ಕ ಗೊರವಯ್ಯ ಕೃಷ್ಣಪ್ಪ ತಿಳಿಸಿದರು.

’ಗಿಡಮೂಲಿಕೆ ಜ್ಞಾನವೂ ನನಗಿದೆ. ಹುಳುಕಡ್ಡಿ, ಕೀಲು–ನೋವು, ಮೂಲವ್ಯಾಧಿ ಮುಂತಾದ ಕಾಯಿಲೆಗಳಿಗೆ ಆಯುರ್ವೇದ ಔಷಧ ಕೊಡುವೆ. ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಮೂಲಿಕೆಗಳು ಚೆನ್ನಾಗಿವೆ. ಅಲ್ಲಿಯೇ ಸಿಗುವ ಮೂಲಿಕೆಗಳನ್ನು ಹೇಗೆ ಬಳಸಬೇಕೆಂದು ಜನರಿಗೆ ತಿಳಿಸುತ್ತೇನೆ. ಗೊರವರ ಕುಣಿತದ ಕಲೆಗೆ ಸಾಂಪ್ರದಾಯಿಕ ನಿಯಮ, ನಿಷ್ಠೆ ಬಹಳ ಮುಖ್ಯ. ಈಗಿನ ಯುವಕರು ಚೆನ್ನಾಗಿ ಓದಿ ಒಳ್ಳೆಯ ಕೆಲಸಗಳಿಗೆ ಸೇರುತ್ತಿರುವುದರಿಂದ ಕಲೆ ಮುಂದಿನ ಪೀಳಿಗೆಗೆ ವಿರಳವಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.