ADVERTISEMENT

ವ್ಯಕ್ತಿತ್ವ ನಿರ್ಮಾಣಕ್ಕೆ ಸಾಹಿತ್ಯದ ಓದು ಮುಖ್ಯ

ಗೋಲ್ಡನ್ ಗ್ಲೀಮ್ಸ್ ಪದವಿಪೂರ್ವ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ‘ಕನ್ನಡ ಡಿಂಡಿಮ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 12:48 IST
Last Updated 31 ಡಿಸೆಂಬರ್ 2019, 12:48 IST
ಕಾರ್ಯಕ್ರಮದಲ್ಲಿ ಪತ್ರಕರ್ತ ಕಾಗತಿ ನಾಗರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತ ಕಾಗತಿ ನಾಗರಾಜಪ್ಪ ಅವರನ್ನು ಸನ್ಮಾನಿಸಲಾಯಿತು.   

ಚಿಕ್ಕಬಳ್ಳಾಪುರ: ‘ಸಾಹಿತ್ಯ ಪರಂಪರೆಯಲ್ಲಿ ಹಳಗನ್ನಡ, ನಡುಗನ್ನಡ, ಆಧುನಿಕ ಕನ್ನಡದ ಜತೆಗೆ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ ಸಾಹಿತ್ಯದ ಅಧ್ಯಯನದಿಂದ ಮಾನವನ ವ್ಯಕ್ತಿತ್ವ ರೂಪುಗೊಳ್ಳುವ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕೂ ಕಾರಣವಾಗುತ್ತದೆ’ ಎಂದು ಉಪನ್ಯಾಸಕ ಎನ್.ಚಂದ್ರಶೇಖರ್ ಹೇಳಿದರು.

ನಗರದ ಗೋಲ್ಡನ್ ಗ್ಲೀಮ್ಸ್ ಪದವಿಪೂರ್ವ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಕನ್ನಡ ಡಿಂಡಿಮ’ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ಉಪನ್ಯಾಸ ನೀಡುತ್ತಾ ಅವರು ಮಾತನಾಡಿದರು.

ಚುಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪಾತಮುತ್ತಕಹಳ್ಳಿ ಎಂ.ಚಲಪತಿಗೌಡ ಮಾತನಾಡಿ, ‘ಕನ್ನಡ ಭಾಷೆ ಬರೀ ಕೊರಳ ಭಾಷೆಯಾಗದೇ ಕರುಳ ಭಾಷೆಯಾಗಬೇಕು. ಕನ್ನಡ ಭಾಷೆ ತಾಯಿ ಮಗುವಿನ ಸಂಬಂಧದಂತೆ ಹೃದಯ ಭಾಷೆಯಾದಾಗ ಮಾತ್ರ ಅದನ್ನು ನಾವೆಲ್ಲರೂ ಉಳಿಸಲು ಸಾಧ್ಯ. ಚುಟುಕು ಸಾಹಿತ್ಯದ ಮೂಲಕ ಸಮಾಜಕ್ಕೆ ಸರಳವಾಗಿ ಜೀವನ ಮೌಲ್ಯಗಳು, ಸಾಮಾಜಿಕ ಕಳಕಳಿ, ನಿಸ್ವಾರ್ಥ ಮನೋಭಾವ, ಸೇವಾಗುಣ, ಪರಿಸರ ಪ್ರಜ್ಞೆ ಪಸರಿಸಬಹುದು’ ಎಂದು ತಿಳಿಸಿದರು.

ADVERTISEMENT

ಕಾಲೇಜಿನ ಉಪಪ್ರಾಂಶುಪಾಲ ಉಮೇಶ್ ಮಾತನಾಡಿ, ‘ನಾವೆಲ್ಲರೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಕನ್ನಡ ಭಾಷೆಯನ್ನು ಬಳಸುತ್ತಾ, ಬೆಳೆಸುತ್ತಾ ಕನ್ನಡ ನಾಡಿನ ಋಣ ತೀರಿಸಬೇಕು’ ಎಂದರು.

‘ಗಡಿಭಾಗದಲ್ಲಿರುವ ನಾವು ಪ್ರತಿಯೊಂದು ವ್ಯವಹಾರವನ್ನು ಕನ್ನಡದಲ್ಲಿಯೇ ನಡೆಸುವಂತಾಗಬೇಕು. ಈ ತಲೆಮಾರಿನಿಂದಾದರೂ ನಮ್ಮ ಗಡಿಭಾಗದಲ್ಲಿ ಕನ್ನಡ ಭಾಷೆ ಉಳಿಸುವ ಕೆಲಸಗಳಾಗಬೇಕು. ವಿದ್ಯಾರ್ಥಿಗಳು ಚಿಕ್ಕಂದಿನಲ್ಲಿಯೇ ಕನ್ನಡ ಪತ್ರಿಕೆಗಳಲ್ಲಿನ ಅಂಕಣ ಬರಹಗಳನ್ನು ಓದುತ್ತಾ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದು ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವಂತರಾಗಬೇಕು. ಟಿವಿ, ಮೊಬೈಲ್‌ಗಳ ದಾಸರಾಗದೇ ವಿದ್ಯಾಭ್ಯಾಸದಲ್ಲಿ ತೊಡಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಲಾವಿದರಾದ ಸೂರಪ್ಪಲ್ಲಿ ಚಂದ್ರಶೇಖರ್, ಗೌಡನಹಳ್ಳಿ ಗೋಪಾಲ್, ಅನುಷಾ ಅವರು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಗೊಳ್ಳುಚಿನ್ನಪ್ಪನಹಳ್ಳಿ ವೆಂಕಟೇಶ್, ರಮಣ್‍ಅಕೇಶ್, ಅಶ್ವತ್ಥ್ ನಾರಾಯಣ ಅವರು ಸ್ವರಚಿತ ಕವನಗಳನ್ನು ವಾಚಿಸಿದರು. ಉಪನ್ಯಾಸಕರಾದ ವೆಂಕಟೇಶ್, ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.