ADVERTISEMENT

ಲೋಕಸಭಾ ಚುನಾವಣೆಯಲ್ಲಿ ಸುಧಾಕರ್ ವಿರುದ್ಧ ಸ್ಪರ್ಧಿಸಲು ಸಿದ್ಧ: ಪ್ರದೀಪ್ ಈಶ್ವರ್

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 16:12 IST
Last Updated 11 ಜನವರಿ 2024, 16:12 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಪ್ರದೀಪ್ ಈಶ್ವರ್ ಭೂಮಿ ಪೂಜೆ ನೆರವೇರಿಸಿದರು 
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಪ್ರದೀಪ್ ಈಶ್ವರ್ ಭೂಮಿ ಪೂಜೆ ನೆರವೇರಿಸಿದರು    

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್  ಸ್ಪರ್ಧಿಸಿದರೆ ನಾನು ಅವರ ವಿರುದ್ಧ ಸ್ಪರ್ಧೆಗೆ ಸಿದ್ಧ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. 

ನಗರದ ಹೊರವಲಯದ ಅಗಲಗುರ್ಕಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಾಜಿ ಸಂಸದ ವೀರಪ್ಪ ಮೊಯ್ಲಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಮತ್ತಿತರರ ಹೆಸರುಗಳು ಲೋಕಸಭೆ ಚುನಾವಣೆಗೆ ಕೇಳಿಬಂದಿವೆ. ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ವರಿಷ್ಠರ ಅಣತಿಯನ್ನು ಪಾಲಿಸುತ್ತೇವೆ. ನೀನೇ ಸ್ಪರ್ಧಿಸು ಎಂದರೂ ಸ್ಪರ್ಧಿಸುವೆ’ ಎಂದು ಹೇಳಿದರು. 

ADVERTISEMENT

‘ರಾಮ ಹಿಂದೂಗಳ ಆರಾಧ್ಯ ದೇವರು. ಕಾಂಗ್ರೆಸ್, ಜೆಡಿಎಸ್‌ನಲ್ಲಿಯೂ ಶ್ರೀರಾಮನ ಭಕ್ತರು ಇದ್ದಾರೆ. ಬಿಜೆಪಿಯವರು ರಾಮಚಂದ್ರ ಅವರ ಮನೆ ಆಸ್ತಿ ಎನ್ನುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಎಲ್ಲ ಧರ್ಮಗಳ ಬಗ್ಗೆ ಗೌರವ ಇದೆ. ಎಲ್ಲರನ್ನು ಸಮಾನವಾಗಿ ಕಾಣಲಾಗುತ್ತದೆ. ಆದರೆ ಧರ್ಮಗಳ ನಡುವೆ ಕಿತ್ತಾಟ ಮಾಡಿಸುವುದು ಬಿಜೆಪಿ ಸಂಸ್ಕೃತಿ’ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಬಿಜೆಪಿ ಭ್ರಮನಿರಸನಗೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಮತ ಸೆಳೆಯಲು ಅಯೋಧ್ಯೆ ಹೆಸರಿನಲ್ಲಿ ಮನೆ, ಮನೆಗೂ ಕರಪತ್ರ ವಿತರಿಸುತ್ತಿದ್ದಾರೆ. ಆದರೆ ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದು, ರಾಜ್ಯದಲ್ಲಿ ಅವರಿಗೆ ಐದರಿಂದ ಆರು ಸ್ಥಾನಗಳು ಬಂದರೆ ಹೆಚ್ಚು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆ ಎಂದು ಹೇಳಿದರು.

‘ಪ್ರತಾಪ್ ಸಿಂಹ ಸೋಲು ಖಚಿತ’

ಸಂಸದ ಪ್ರತಾಪ್ ಸಿಂಹ ಅಯೋಗ್ಯ ಮುಠ್ಠಾಳ ಎಂದು ಏಕವಚನಲ್ಲಿ ಶಾಸಕ ಪ್ರದೀಪ್ ಜರಿದರು. ‘45 ವರ್ಷಗಳ ರಾಜಕೀಯ ಅನುಭವವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಾಪ್ ಸಿಂಹ ಮಾತನಾಡುವಾಗ ಎಚ್ಚರಕೆಯಿಂದ ಇರಬೇಕು. ಅವರು ಒಂದು ಕಲ್ಲು ಹಾಕಿದರೆ ನಮಗೆ ನಾಲ್ಕು ಕಲ್ಲು ಹಾಕುವುದಕ್ಕೆ ಬರುತ್ತದೆ. ಸುಮ್ಮನೆ ಬಾಯಿ ಮುಚ್ಚಿಕೊಂಡಿರಬೇಕು. ಈ ಬಾರಿ ಪ್ರತಾಪ್ ಸಿಂಹ ಸೋಲುವುದು ಖಚಿತ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.