ಚಿಕ್ಕಬಳ್ಳಾಪುರ: ನಗರದ ಹೊರವಲಯದ ಚೊಕ್ಕಹಳ್ಳಿ ಸಮೀಪ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು.
ಜಿಲ್ಲೆಯ 154 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಡಿ ದುರಸ್ತಿ, ಇ ಪೌತಿ ಖಾತೆ, ಕಂದಾಯ ಗ್ರಾಮ ಮತ್ತು ಸಾಮಾಜಿಕ ಸೇವಾ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತದೆ. ಒಟ್ಟು 25 ಸಾವಿರ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಮಾತನಾಡಿ, ಕಂದಾಯ ಇಲಾಖೆಗೆ ಹೊಸ ದಿಕ್ಕು ತೋರಿಸಿರುವುದು ಕೃಷ್ಣ ಬೈರೇಗೌಡ.
ಸುಮಾರು 20 ವರ್ಷಗಳ ಕನಸು ಇದು. ಕಂದಾಯ ಇಲಾಖೆಯ ಸಮಸ್ಯೆಗಳ ಬಗ್ಗೆ ನಾನು ಕೃಷ್ಣ ಬೈರೇಗೌಡ ಅವರು ಬಹಳಷ್ಟು ಚರ್ಚಿಸಿದ್ದೇವೆ. ದುರಸ್ತಿ ಆಗಿಲ್ಲ ಪೋಡಿ ಆಗಿಲ್ಲ ಎಂದು ಜನರು ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ನಿಶ್ಚಯಿಸಿದ್ದೆವು ಎಂದರು.
ಪೌತಿ ಖಾತೆ ನಿರಂತರವಾಗಿ ಇರುವ ಸಮಸ್ಯೆ. ನಿಮ್ಮ ಮನೆ ಬಾಗಿಲಿಗೆ ಬಂದು ಅಧಿಕಾರಿಗಳು ಪೌತಿ ಖಾತೆ ಮಾಡಿಕೊಡುತ್ತಿದ್ದಾರೆ. ಹೀಗೆ ಕಂದಾಯ ಇಲಾಖೆ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕರಾದ ಪ್ರದೀಪ್ ಈಶ್ವರ್, ಕೆ.ಎಚ್.ಪುಟ್ಟ ಸ್ವಾಮಿಗೌಡ, ವಿವಿಧ ನಿಗಮಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ಜಿ.ಪ್ರಭು, ಜಿ.ಪಂ ಸಿಇಒ ನವೀನ್ ಭಟ್ ಮತ್ತಿತರರು ಪಾಲ್ಗೊಂಡಿದ್ದಾರೆ.