ADVERTISEMENT

ರಸ್ತೆ ಸುರಕ್ಷತಾ ನಿಯಮ ಪಾಲಿಸಿ: 32ನೇ ರಾಷ್ಟ್ರೀಯ ಸಪ್ತಾಹ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:09 IST
Last Updated 19 ಜನವರಿ 2021, 2:09 IST
ಚಿಂತಾಮಣಿಯಲ್ಲಿ ಸೋಮವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕರಪತ್ರವನ್ನು ಬಿಡುಗಡೆ ಮಾಡಲಾಯಿತು
ಚಿಂತಾಮಣಿಯಲ್ಲಿ ಸೋಮವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕರಪತ್ರವನ್ನು ಬಿಡುಗಡೆ ಮಾಡಲಾಯಿತು   

ಚಿಂತಾಮಣಿ: ವಾಹನ ಮಾಲೀಕರು ಹಾಗೂ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜಪ್ಪ ಸಲಹೆ ನೀಡಿದರು.

ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಅವರು ಮಾತನಾಡಿದರು.

ಸರ್ಕಾರದ ಆದೇಶದಂತೆ ಪ್ರತಿವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಒಂದು ತಿಂಗಳ ಕಾಲ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಸ್ತೆ ನಿಯಮಗಳ ಕುರಿತು ಚಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಅನೇಕ ಅಪಘಾತಗಳು ಮಾನವ ತಪ್ಪುಗಳಿಂದಲೇ ಆಗುತ್ತವೆ. ಅಮಾಯಕರು ಜೀವ ಕಳೆದುಕೊಂಡು ಅವಲಂಬಿಸಿರುವವರನ್ನು ಬೀದಿಪಾಲು ಮಾಡುತ್ತಾರೆ. ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಎಲ್ಲಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದುಸೂಚಿಸಿದರು.

ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರ ಚಿಹ್ನೆಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯತೆ ತೋರದೆ ನಿಯಮ ಪಾಲನೆ ಮಾಡಬೇಕು. ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದರು.

ಸಾರಿಗೆ ಇನ್‌ಸ್ಪೆಕ್ಟರ್ ನಾಗರಾಜು ಮಾತನಾಡಿ, ಎಲ್ಲ ವಾಹನ ಚಾಲಕರು ಹಾಗೂ ಮಾಲೀಕರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳ ಒಂದು ಸೆಟ್ ಅನ್ನು ವಾಹನದಲ್ಲಿ ಜೋಪಾನವಾಗಿ ಇಟ್ಟಿರಬೇಕು. ದಾಖಲೆಗಳು ಇಲ್ಲದೆ ರಸ್ತೆಗೆ ಬರಬಾರದು. ಚಾಲನಾ ಪರವಾನಗಿ, ವಾಹನದ ಆರ್.ಸಿ, ವಿಮೆ ದಾಖಲೆ, ಎಮಿಷನ್ ಪ್ರಮಾಣ ಪತ್ರ ಮತ್ತಿತರ ವಿವರ ಹೊಂದಿರಬೇಕು. ಕಾನೂನುಗಳು ಬದಲಾಗಿದ್ದು ನಿಯಮಗಳ ಉಲ್ಲಂಘನೆಗೆ ದಂಡ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಅಧೀಕ್ಷಕ ಆನಂದಕುಮಾರ್, ವೇಣುಗೋಪಾಲ್, ದೇವರಾಜು, ಶ್ರೀನಿವಾಸ್ ಹಾಗೂ ಚಾಲಕರು, ಮಾಲೀಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.