ADVERTISEMENT

ರಸ್ತೆ ವಿಸ್ತರಣೆ; ಓಲೈಕೆ ರಾಜಕಾರಣ ಮಾಡುವುದಿಲ್ಲ: ಶಾಸಕ ಪ್ರದೀಪ್ ಈಶ್ವರ್

ವರವಣಿ ಗ್ರಾಮದಲ್ಲಿ ‘ನಮ್ಮ ಊರಿಗೆ ನಮ್ಮ ಶಾಸಕ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:35 IST
Last Updated 26 ಜುಲೈ 2025, 4:35 IST
ಮಂಚೇನಹಳ್ಳಿ ತಾಲ್ಲೂಕಿನ ವರವಣಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್ 
ಮಂಚೇನಹಳ್ಳಿ ತಾಲ್ಲೂಕಿನ ವರವಣಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್    

ಮಂಚೇನಹಳ್ಳಿ: ಬಜಾರ್ ರಸ್ತೆ ಮತ್ತು ಗಂಗಮ್ಮನ ಗುಡಿ ರಸ್ತೆ ವಿಸ್ತರಣೆ ಮಾಡಲಾಗುವುದು. ನಾನು ಓಲೈಕೆ ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ತಾಲ್ಲೂಕಿನ ವರವಣಿ ಗ್ರಾಮದಲ್ಲಿ ಶುಕ್ರವಾರ ‘ನಮ್ಮ ಊರಿಗೆ ನಮ್ಮ ಶಾಸಕ’ ಕಾರ್ಯಕ್ರಮ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರಿ ರಸ್ತೆಯಲ್ಲಿ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಒತ್ತುವರಿ ತೆರವುಗೊಳಿಸಿ ಎಂದು ಹೈಕೋರ್ಟ್ ಈ ಹಿಂದೆಯೇ ಆದೇಶಿಸಿದೆ. ಹೈಕೋರ್ಟ್ ಆದೇಶ ಜಾರಿಗೊಳಿಸುತ್ತೇವೆ. 45 ದಿನಗಳ ಕಾಲ ಕಾದು ನೋಡಲಾಗುವುದು. ಒತ್ತುವರಿದಾರರು ಅವರಾಗಿಯೇ ತೆರವುಗೊಳಿಸದಿದ್ದರೆ ಜೆಸಿಬಿ ಕೊಂಡೊಯ್ದು ತೆರವುಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ADVERTISEMENT

ಬಜಾರ್ ರಸ್ತೆ ಮತ್ತು ಗಂಗಮ್ಮನ ಗುಡಿ ರಸ್ತೆ ವಿಸ್ತರಣೆಗೆ ಎರಡು ಬಾರಿ ಗುರುತು ಹಾಕಲಾಗಿತ್ತು. ವಿಸ್ತರಣೆಗೆ ₹ 8 ಕೋಟಿ ಅನುದಾನ ಅಗತ್ಯವಿತ್ತು. ಈಗ ಸರ್ಕಾರ ನಮಗೆ ₹ 50 ಕೋಟಿ ಅನುದಾನ ನೀಡುತ್ತಿದೆ. ಇದರಲ್ಲಿ ₹ 7 ಕೋಟಿಯಿಂದ ₹ 8 ಕೋಟಿಯನ್ನು ರಸ್ತೆ ವಿಸ್ತರಣೆಗೆ ಬಳಸಲಾಗುವುದು. ನಗರಸಭೆಯ ಬಳಿ ಇಷ್ಟು ಹಣ ಇಲ್ಲ ಎಂದು ಹೇಳಿದರು.

2007ರಲ್ಲಿ ಎಂ.ಜಿ ರಸ್ತೆ ವಿಸ್ತರಣೆ ಬಗ್ಗೆ ಮಾತುಗಳು ಕೇಳಿದ್ದವು. ಆದರೆ ಸಾಧ್ಯವಾಗಿರಲಿಲ್ಲ. ನಾನು ಅಧಿಕಾರಕ್ಕೆ ಬಂದೇ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ವಿಸ್ತರಣೆಗೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು.

ನಗರದ ಅಭಿವೃದ್ಧಿ ದೃಷ್ಟಿಯಿಂದ ಬಜಾರ್ ರಸ್ತೆ ಮತ್ತು ಗಂಗಮ್ಮನಗುಡಿ ರಸ್ತೆ ವಿಸ್ತರಣೆ ಅಗತ್ಯ. ರಸ್ತೆ ಕಿರಿದಾದ ಕಾರಣ ಜನರಿಗೆ ಸಮಸ್ಯೆ ಆಗುತ್ತಿದೆ. ಜನರಿಗೆ ಒಳ್ಳೆಯದನ್ನು ಮಾಡಲು 20, 30 ವರ್ಷ ಬೇಕಾಗಿಲ್ಲ. ನನ್ನ ಅಧಿಕಾರ ಅವಧಿಯ ಐದು ವರ್ಷದಲ್ಲಿಯೇ ಒಳ್ಳೆಯ ಕೆಲಸ ಮಾಡುವೆ ಎಂದರು.   

ಈ ಹಿಂದೆ ವರವಣಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಜನರು ರಸ್ತೆ ಒತ್ತುವರಿಯ ಸಮಸ್ಯೆಯ ಬಗ್ಗೆ ತಿಳಿಸಿದ್ದರು. ನಾಲ್ಕು ಗುಂಟೆ ರಸ್ತೆ ಒತ್ತುವರಿ ತೆರವುಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುವೆ. ಸ್ಮಶಾನಕ್ಕೆ ರಸ್ತೆ, ಚರಂಡಿ ಸೌಲಭ್ಯ ಕಲ್ಪಿಸಿಕೊಡುವೆ ಎಂದು ಹೇಳಿದರು.

ಮಂಚೇನಹಳ್ಳಿ ತಾಲ್ಲೂಕಿನ 40 ಹಳ್ಳಿಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ಹಲವು ಹಳ್ಳಿಗಳಲ್ಲಿ ರಸ್ತೆ ಮಾಡಿಸಿದ್ದೇನೆ. ವೈದ್ಯಕೀಯ ಕಾಲೇಜು, ಎರಡು ಅಂತಸ್ತಿನ ಕಟ್ಟಡಗಳನ್ನು ಕಟ್ಟುವುದೇ ಅಭಿವೃದ್ಧಿಯಲ್ಲ. ಜನರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.