
ಶಿಡ್ಲಘಟ್ಟ: ತಾಲ್ಲೂಕಿನ ಎಚ್. ಕ್ರಾಸ್ ಬಳಿ ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಕಾರ್ಮಿಕರ ಬಳಿಯಿದ್ದ ಮೊಬೈಲ್‌ಗಳನ್ನು ಕಿತ್ತು ಪರಾರಿಯಾಗುವ ಧಾವಂತದಲ್ಲಿ ದರೋಡೆಕೋರರ ಕಾರು ಪಲ್ಟಿಯಾಗಿದೆ. ಈ ಘಟನೆಯಲ್ಲಿ ದರೋಡೆಕೋರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತನನ್ನು ಆಂಧ್ರಪ್ರದೇಶದ ಚಿತ್ತೂರಿನ ಸಿದ್ದು (25) ಅಲಿಯಾಸ್ ಸಿದ್ದೇಶ್ ಎಂದು ಗುರುತಿಸಲಾಗಿದೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಪಿ ಕುಶಾಲ್ ಚೌಕ್ಸೆ, ‘ಶಿಡ್ಲಘಟ್ಟ–ಎಚ್. ಕ್ರಾಸ್ ಮಾರ್ಗದ ಹಾರಡಿ ಬಳಿ ಟೈಲ್ಸ್ ಕಾರ್ಖಾನೆಯ ನಾಲ್ವರು ಕಾರ್ಮಿಕರು ಕೆಲಸ ಮುಗಿಸಿಕೊಂಡು ತಮ್ಮ ಸ್ವಂತ ಊರು ಉತ್ತರ ಪ್ರದೇಶಕ್ಕೆ ತೆರಳಲು ಬಸ್‌ಗಾಗಿ ಎಚ್. ಕ್ರಾಸ್‌ಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ ಬೆದರಿಸಿ, ಕಾರ್ಮಿಕರ ಬಳಿಯಿದ್ದ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾತ್ರಿ ಗಸ್ತು ಮುಗಿಸಿ ಠಾಣೆಗೆ ಜೀಪಿನಲ್ಲಿ ವಾಪಸ್ ಆಗುತ್ತಿದ್ದ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಎಸ್.ಐ ಅನ್ನು ಕಂಡ ಕೂಲಿ ಕಾರ್ಮಿಕರು, ಕಳ್ಳರು ತಮ್ಮ ಮೊಬೈಲ್ ಕದ್ದು ಪರಾರಿಯಾಗಿದ್ದನ್ನು ತಿಳಿಸಿದರು. ಈ ಸಂಬಂಧ ಕಾರ್ಯಾಚರಣೆಗೆ ಮುಂದಾದ ಪೊಲೀಸರು, ದರೋಡೆಯಾದ ಮೊಬೈಲ್‌ಗಳ ಟವರ್ ಲೊಕೇಷನ್ ತಿಳಿದು ದರೋಡೆಕೋರರನ್ನು ಹಿಂಬಾಲಿಸಿದರು. ಅಷ್ಟರಲ್ಲಾಗಲೇ ಶಿಡ್ಲಘಟ್ಟ–ಜಂಗಮಕೋಟೆ ಮಾರ್ಗದ ಬೋದಗೂರು ಮಳಮಾಚನಹಳ್ಳಿ ಮಧ್ಯೆ ದರೋಡೆಕೋರರ ಕಾರು ರಸ್ತೆ ಪಕ್ಕ ಉರುಳಿಬಿದ್ದಿತ್ತು ಎಂದರು.
ದರೋಡೆಕೋರರು ಬಂದ ಕಾರಿನಲ್ಲಿ ಮೊಬೈಲ್ ಟವರ್‌ಗೆ ಬಳಸುವ ಕಬ್ಬಿಣದ ರಾಡುಗಳು, ಕಬ್ಬಿಣದ ಇನ್ನಿತರ ವಸ್ತುಗಳು ದೊರೆತಿವೆ. ಮದ್ಯದ ಬಾಟಲಿಗಳು ಕೂಡ ಇದ್ದವು. ಬೋದಗೂರು–ಮಳಮಾಚನಹಳ್ಳಿ ಮಧ್ಯೆ ರಸ್ತೆ ಅಂಕುಡೊಂಕಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳುಬಿದ್ದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆ ಉಪ ಕಸುಬು
ಮೂಲತಃ ಆಂಧ್ರಪ್ರದೇಶದ ಚಿತ್ತೂರಿನವರಾಗಿದ್ದು ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ಹೆಂಡತಿ ಜೊತೆ ಕೈವಾರದಲ್ಲಿ ನೆಲಸಿದ್ದರು. ದರೋಡೆ ಕೃತ್ಯದಲ್ಲಿ ಭಾಗಿಯಾಗಿ ಇದೀಗ ಪೊಲೀಸರ ಅತಿಥಿಯಾಗಿರುವ ವೈಶಾಖ್ ಕನ್ನಮಂಗಲದವರು. ಈ ಇಬ್ಬರು ಲಾರಿ ಚಾಲಕರಾಗಿದ್ದರು. ಈ ಇಬ್ಬರು ಕಳೆದ ಹಲವು ದಿನಗಳಿಂದ ಪರಿಚಿತರಾಗಿದ್ದು ಲಾರಿ ಚಾಲನೆ ಜೊತೆಗೆ ಆಗ್ಗಾಗ್ಗೆ ದರೋಡೆ ಕೃತ್ಯಗಳಲ್ಲೂ ತೊಡಗುತ್ತಿದ್ದರು. ಇಬ್ಬರು ಕುಡಿತದ ದಾಸರಾಗಿದ್ದು ಮೊಬೈಲ್ ದರೋಡೆ ಮಾಡುವ ಮುನ್ನ ವಿಪರೀತ ಮದ್ಯ ಸೇವಿಸಿದ್ದರು ಎಂದು ಎಸ್.ಪಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ. ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ ವೇಮಗಲ್ ಬಳಿಯ ಕೈಗಾರಿಕೆ ಪ್ರದೇಶ ಸೇರಿದಂತೆ ಇತರೆ ಕಡೆ ಇವರು ದರೋಡೆ ಮಾಡುತ್ತಿದ್ದರು ಎಂಬ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.