ADVERTISEMENT

ಚಿಂತಾಮಣಿ: ಸದ್ಗುರು ತಾತಯ್ಯ ಜಯಂತಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 3:40 IST
Last Updated 29 ಮಾರ್ಚ್ 2021, 3:40 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಭಾನುವಾರ ನಡೆದ ಉತ್ಸವ ಮೂರ್ತಿಗಳ ಪ್ರಾಕಾರೋತ್ಸವ
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಭಾನುವಾರ ನಡೆದ ಉತ್ಸವ ಮೂರ್ತಿಗಳ ಪ್ರಾಕಾರೋತ್ಸವ   

ಚಿಂತಾಮಣಿ: ಶ್ರೀಕ್ಷೇತ್ರ ಕೈವಾರದ ಸದ್ಗುರು ಶ್ರೀಯೋಗಿ ನಾರೇಯಣ ಮಠದಲ್ಲಿ ಫಾಲ್ಗುಣ ಮಾಸದ ಹುಣ್ಣಿಮೆಯ ಭಾನುವಾರ ಕೈವಾರ ತಾತಯ್ಯನವರ ಜಯಂತಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಜಯಂತಿ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ತಾತಯ್ಯನವರ ಮೂಲ ವಿಗ್ರಹವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಶ್ರೀದೇವಿ, ಭೂದೇವಿ ಸಮೇತ ಶ್ರೀಅಮರನಾರೇಯಣಸ್ವಾಮಿ ಹಾಗೂ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗಳನ್ನು ಪೀಠದಲ್ಲಿ ಆಸೀನ ಮಾಡಿಸಿ ವಿಶೇಷ ಪಂಚಾಮೃತ ಹಾಗೂ ಮಂಗಳದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.

ಅಭಿಷೇಕದ ನಂತರ ಉತ್ಸವ ವಿಗ್ರಹಗಳನ್ನು ಸರ್ವಾಂಗ ಸುಂದರವಾಗಿ ಅಲಂಕರಿಸಿ, ತಾತಯ್ಯನವರ ವತಿಯಿಂದ ಶ್ರೀಕೃಷ್ಣಗಂಧೋತ್ಸವ ಸೇವೆಯನ್ನು ಶ್ರೀಅಮರನಾರೇಯಣಸ್ವಾಮಿಗೆ ಸಲ್ಲಿಸಲಾಯಿತು. ಅಷ್ಟಾವಧಾನ ಸೇವೆ ನೆರವೇರಿಸಿ ಮಹಾಮಂಗಳಾರತಿ ಬೆಳಗಲಾಯಿತು.

ADVERTISEMENT

ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ತಾತಯ್ಯನ ಜಯಂತಿಯ ಮಹತ್ವ ವಿವರಿಸಿದರು. ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅವರು ಸದ್ಗುರು ತಾತಯ್ಯನವರು ರಚಿಸಿರುವ ಶ್ರೀಕೃಷ್ಣಚರಿತ ತತ್ವಾಮೃತ ಯೋಗಸಾರಮು ಕೃತಿಯಿಂದ ಆಯ್ದ ಭಾಗದ ಗಮಕ ವಾಚನ ಹಾಗೂ ವ್ಯಾಖ್ಯಾನ ಮಾಡಿದರು. ಇದೇ ಸಂದರ್ಭದಲ್ಲಿ ತಾತಯ್ಯನವರು ರಚಿಸಿರುವ ಕಾಲಜ್ಞಾನದ ಇಂಗ್ಲಿಷ್ ಅವತರಣಿಕೆಯ ಪ್ರತಿಯನ್ನು ಸಮರ್ಪಿಸಲಾಯಿತು. ತೆಲುಗಿನಿಂದ ಇಂಗ್ಲಿಷ್‌ಗೆ ಅಂಬಿಕಾ ಅನಂತ್ ಅನುವಾದಿಸಿದ್ದಾರೆ.

ನಂತರ ಎರಡು ಪಲ್ಲಕ್ಕಿಗಳಲ್ಲಿ ಉತ್ಸವ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪ್ರಾಕಾರೋತ್ಸವ ನೆರವೇರಿಸಲಾಯಿತು. ಒಂದು ಪಲ್ಲಕ್ಕಿಯಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀಅಮರನಾರೇಯಣಸ್ವಾಮಿ, ಇನ್ನೊಂದರಲ್ಲಿ ಸದ್ಗುರು ತಾತಯ್ಯನವರ ಉತ್ಸವ ವಿಗ್ರಹಗಳನ್ನು ಮೆರವಣಿಗೆ ಮಾಡಲಾಯಿತು. ಕಡ್ಡಾಯವಾಗಿ ಮಾಸ್ಕ್ ಧರಿಸಿರುವವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉಚಿತವಾಗಿ ಮಾಸ್ಕ್ ವಿತರಿಸುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ನಾದ ಸುಧಾರಸ ವೇದಿಕೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತರು ತಾತಯ್ಯನವರನ್ನು ದರ್ಶಿಸಿ ಪುನೀತರಾದರು. ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ದಂಪತಿ, ಟ್ರಸ್ಟ್‌ ಉಪಾಧ್ಯಕ್ಷ ಜೆ. ವಿಭಾಕರ ರೆಡ್ಡಿ, ಖಜಾಂಚಿ ಆರ್.ಪಿ.ಎಂ. ಸತ್ಯ ನಾರಾಯಣ್, ಸದಸ್ಯರಾದ ಡಾ.ಎಂ.ವಿ. ಶ್ರೀನಿವಾಸ್, ಗಣೇಶ್ ಚಂದ್ರಪ್ಪ, ಕೆ.ವಿ. ಸುರೇಶ್, ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎನ್. ಕೃಷ್ಣಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.