ADVERTISEMENT

ಸತ್ಯಸಾಯಿ ಗ್ರಾಮದಲ್ಲಿ ಉಮಾ ಮಹೇಶ್ವರ ದೇಗುಲ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 6:49 IST
Last Updated 3 ಅಕ್ಟೋಬರ್ 2025, 6:49 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪ್ರಯುಕ್ತ ನಡೆದ ಅತಿರುದ್ರ ಮಹಾಯಜ್ಞಕ್ಕೆ ಸದ್ಗುರು ಮಧುಸೂದನ ಸಾಯಿ ಮಹಾಪೂರ್ಣಾಹುತಿ ಸಮರ್ಪಿಸಿದರು 
ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಪ್ರಯುಕ್ತ ನಡೆದ ಅತಿರುದ್ರ ಮಹಾಯಜ್ಞಕ್ಕೆ ಸದ್ಗುರು ಮಧುಸೂದನ ಸಾಯಿ ಮಹಾಪೂರ್ಣಾಹುತಿ ಸಮರ್ಪಿಸಿದರು    

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ವಿಜಯ ದಶಮಿ ದಿನ ಸದ್ಗುರು ಮಧುಸೂದನ ಸಾಯಿ ಅವರ ಮಾರ್ಗದರ್ಶನದಲ್ಲಿ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ, ಕಳಸ ಪ್ರತಿಷ್ಠಾಪನೆ ವಿಧಿಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.  

ಪ್ರಾಣ ಪ್ರತಿಷ್ಠಾಪನೆಯ ನಂತರ ಉಮಾ-ಮಹೇಶ್ವರ ದೇವರ ರಥಯಾತ್ರೆ ನಡೆಯಿತು. ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ದುರ್ಗಾಪೂಜೆ ಮತ್ತು ಅತಿರುದ್ರ ಮಹಾಯಜ್ಞಗಳು ಗುರುವಾರ ಸಂಪನ್ನಗೊಂಡವು. ಶಾಂತಿಕೊಡುವ ಲಕ್ಷ್ಮಿನಾರಾಯಣ ಹೃದಯ ಹೋಮ, ಸಂಪತ್ತು ಪ್ರದಾಯಕ ಎಂಬ ನಂಬಿಕೆಯಿರುವ ಕುಬೇರ ಲಕ್ಷ್ಮಿ ಹೋಮಗಳು ಶಾಸ್ತ್ರಬದ್ಧವಾಗಿ ನೆರವೇರಿದವು. ಬಂಗಾಳಿ ಶೈಲಿಯ ದುರ್ಗಾ ಆರತಿಯ ನಂತರ ದುರ್ಗೆಯ ವಿಗ್ರಹವನ್ನು ವಿಸರ್ಜಿಸಲಾಯಿತು.

ಈ ವೇಳೆ ಆಶೀರ್ವಚನ ನೀಡಿದ ಸದ್ಗುರು ಮಧುಸೂದನ ಸಾಯಿ, ‘ಜಗತ್ತಿನ ತಂದೆ-ತಾಯಿಗಳಾದ ಈಶ್ವರ-ಪಾರ್ವತಿಯರು ನಮ್ಮ ಆಶ್ರಮಕ್ಕೆ ಬಂದಿದ್ದಾರೆ. ಅವರ ಕುಟುಂಬದಲ್ಲಿ ನಂದಿ, ಸರ್ಪ, ಇಲಿ, ನವಿಲು, ಸಿಂಹಗಳೂ ಇವೆ. ಒಂದು ಶಿಸ್ತು ಇಲ್ಲದಿದ್ದರೆ ಇವುಗಳ ಪರಿಸ್ಥಿತಿ ಏನಾಗಬಹುದು ಊಹಿಸಿ? ನಾವು ದೇವರ ಕುಟುಂಬ ಎನ್ನುವ ಭಾವ ನಮ್ಮಲ್ಲಿ ಸದಾ ಜಾಗೃತವಾಗಿದ್ದರೆ ನಮ್ಮ ಬದುಕು ಸುಧಾರಿಸುತ್ತದೆ. ಈ ದೇಗುಲದಲ್ಲಿ ಪ್ರಾಣಪ್ರತಿಷ್ಠಾಪನೆಯಾದ ನಂತರ ಇದು ಭೂ ಲೋಕದ ಕೈಲಾಸವೇ ಆಗಲಿದೆ’ ಎಂದು ವಿವರಿಸಿದರು.

ADVERTISEMENT

ಹೋಮ, ಯಜ್ಞ, ಪೂಜೆಗಳ ಮೂಲಕ ಇಲ್ಲಿಗೆ ಆವಾಹನೆಗೊಂಡ ಎಲ್ಲ ದೇವತೆಗಳು ಈ ಸ್ಥಳವನ್ನು ಆಶೀರ್ವದಿಸಿದ್ದಾರೆ. ಇದು ನಿಜವಾಗಿಯೂ ಪುಣ್ಯ ಕ್ಷೇತ್ರವಾಗಿದೆ. ಶ್ರದ್ಧೆಯಿಂದ ನಡೆಸಲಾದ ಈ ಎಲ್ಲ ಆಚರಣೆಗಳಿಂದ ಪರಮಾತ್ಮನು ಸಂಪ್ರೀತನಾಗಿದ್ದಾನೆ. ಜಗತ್ತಿನ ಎಲ್ಲ ಒಳ್ಳೆಯ ಜನರು ಸುರಕ್ಷಿತವಾಗಿರಲಿ. ಇಡೀ ಜಗತ್ತು ಸಂತೋಷವಾಗಿರಲಿ ಎನ್ನುವ ಪ್ರಾರ್ಥನೆಯೊಂದಿಗೆ ಅತಿರುದ್ರ ಮಹಾಯಜ್ಞವನ್ನು ಪೂರ್ಣಗೊಳಿಸುತ್ತಿದ್ದೇವೆ ಎಂದರು.

ಶಿಕ್ಷಣಕ್ಕೆ ಬೆಂಬಲ ನೀಡುತ್ತಿರುವ 'ಭಾರತೀಯ ಜೀವ ವಿಮಾ ನಿಗಮ'ಕ್ಕೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಶಿವಮೊಗ್ಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಪಿ ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.