ADVERTISEMENT

‘ಸಕಾಲ’; ಚಿಕ್ಕಬಳ್ಳಾಪುರಕ್ಕೆ ಮೊದಲ ಸ್ಥಾನ

62,451 ಅರ್ಜಿಗಳ ಪೈಕಿ 61,556 ಅರ್ಜಿ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:12 IST
Last Updated 8 ನವೆಂಬರ್ 2025, 6:12 IST
ಚಿಕ್ಕಬಳ್ಳಾಪುರದಲ್ಲಿ ನಡೆದ ‘ಸಕಾಲ ಜಾಗೃತಿ ಅರಿವು ಸಪ್ತಾಹ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು 
ಚಿಕ್ಕಬಳ್ಳಾಪುರದಲ್ಲಿ ನಡೆದ ‘ಸಕಾಲ ಜಾಗೃತಿ ಅರಿವು ಸಪ್ತಾಹ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು    

ಚಿಕ್ಕಬಳ್ಳಾಪುರ: ಕಳೆದ ಅಕ್ಟೋಬರ್‌ನ ‌‘ಸಕಾಲ’ ಪ್ರಗತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲನೇ ಸ್ಥಾನ ಪಡೆದಿದೆ. ಇದು ಹರ್ಷದಾಯಕ ವಿಚಾರ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ‘ಸಕಾಲ ಜಾಗೃತಿ ಅರಿವು ಸಪ್ತಾಹ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಕ್ಟೋಬರ್‌ನಲ್ಲಿ ಒಟ್ಟು 62,451 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಲಾಗಿದ್ದು, ಈ ಪೈಕಿ 61,556 ಅರ್ಜಿಗಳನ್ನು ನಿಯಮಗಳ ಅನ್ವಯ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. 4,001 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕೃತಗೊಂಡಿವೆ. 310 ಅರ್ಜಿಗಳು ವಿಲೇವಾರಿ ಬಾಕಿ ಇವೆ ಎಂದು ಹೇಳಿದರು.

ADVERTISEMENT

ನಿಗದಿತ ಕಾಲಮಿತಿಯೊಳಗೆ ಅರ್ಜಿಗಳು ವಿಲೇವಾರಿ ಆಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಆಡಳಿತವೂ ಪಾರದರ್ಶಕವಾಗಿ ನಡೆಯಲು ಈ ಯೋಜನೆ ಸಹಕಾರಿ ಆಗಿದೆ. ಸಕಾಲ ಯೋಜನೆ ಅನುಷ್ಠಾನದಲ್ಲಿ ಅಕ್ಟೋಬರ್‌ನಲ್ಲಿಯೂ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿರುವುದು ಸಂತಸ ಎಂದು ಮಾಹಿತಿ ನೀಡಿದರು.

ಸಕಾಲ ಸಮನ್ವಯ ಸಮಿತಿಯ ಮುಖ್ಯಸ್ಥ ಸದಸ್ಯರೊಂದಿಗೆ ಮತ್ತು ಇಲಾಖೆಗಳ ಪ್ರತಿನಿಧಿಯೊಂದಿಗೆ ಇಲಾಖೆವಾರು ಅವಧಿಗೂ ಮೀರಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಚರ್ಚಿಸಿ ತ್ವರಿತವಾಗಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು.

ಸಕಾಲ ಅರ್ಜಿಗಳನ್ನು ವಿಲೇವಾರಿ ಮಾಡಲು ವಿವಿಧ  ಇಲಾಖೆಗಳಲ್ಲಿನ ತಾಂತ್ರಿಕ ದೋಷದ ಸಂಬಂಧಿತವಾಗಿ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸವಾಲೋಚಕರೊಂದಿಗೆ ಚರ್ಚಿಸಿದರು. ಆಯಾ ಇಲಾಖೆಯ ತಾಂತ್ರಿಕ ತಂಡದ ಮುಖ್ಯಸ್ಥರೊಂದಿಗೆ ಸಮನ್ವಯ ಸಾಧಿಸಿ ಹಿಂಬಾಲಿಕ ಕ್ರಮವನ್ನು ಅನುಸರಿಸಿ ಸಕಾಲ ಅನುಷ್ಠಾನದಲ್ಲಿ ಅಡೆತಡೆ ಆಗದಂತೆ ಎಚ್ಚರ ವಹಿಸಲು ನಿರ್ದೇಶಿಸಿದರು.

ಸಕಾಲ ಅಧಿನಿಯಮದ ಹಿನ್ನೆಲೆ, ಕಲಂಗಳ ನಿರ್ದೇಶನದ ಅನುಸಾರ ಹೆಸರಿಸಲಾದ ಅಧಿಕಾರಿ, ಸಕ್ಷಮಾಧಿಕಾರಿ, ಮೇಲ್‌ ಮನವಿ ಅಧಿಕಾರಿಗಳ ಕಾರ್ಯ ವೈಖರಿಯ ಜವಾಬ್ದಾರಿಯನ್ನು ನಿರ್ವಹಿಸುವ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು.

ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬಂದಿ ಉಪಸ್ಥಿತರಿದ್ದರು. 

‘ಕಾರಣ ಕೇಳಿ ನೋಟಿಸ್ ಜಾರಿ’

ಸಕಾಲ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗದ ತಪ್ಪಿತಸ್ಥ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಆನ್‌ಲೈನ್‌ನಲ್ಲಿಯೇ ಕಾರಣ ಕೇಳಿ ನೀಡುವ ನೋಟಿಸ್ ಜಾರಿಗೊಳಿಸಿ ತುರ್ತು ಕ್ರಮ ಕೈ ಗೊಳ್ಳಲು ಸಕ್ಷಮ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು. ಸಕಾಲ ಜಾಗೃತಿ ಮೂಡಿಸುವ ಸಲುವಾಗಿ ಅರಿವು ಕಾರ್ಯಕ್ರಮಗಳನ್ನು ಇಲಾಖೆಗಳ ಕಡೆಯಿಂದ ಆಯೋಜಿಸಲು ಸೂಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.