ADVERTISEMENT

ಐವಾರಪಲ್ಲಿ: ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 7:40 IST
Last Updated 9 ನವೆಂಬರ್ 2020, 7:40 IST
ಬಾಗೇಪಲ್ಲಿ ತಾಲ್ಲೂಕಿನ ಐವಾರಪಲ್ಲಿ ಗ್ರಾಮದಲ್ಲಿ ಬೆಂಗಳೂರಿನ ರಾಬಿನ್‌ವುಡ್ ಆರ್ಮಿ ತಂಡ ಹಾಗೂ ಜನವಾದಿ ಮಹಿಳಾ ಸಂಘಟನೆಯಿಂದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು
ಬಾಗೇಪಲ್ಲಿ ತಾಲ್ಲೂಕಿನ ಐವಾರಪಲ್ಲಿ ಗ್ರಾಮದಲ್ಲಿ ಬೆಂಗಳೂರಿನ ರಾಬಿನ್‌ವುಡ್ ಆರ್ಮಿ ತಂಡ ಹಾಗೂ ಜನವಾದಿ ಮಹಿಳಾ ಸಂಘಟನೆಯಿಂದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು   

ಬಾಗೇಪಲ್ಲಿ: ‘ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು’ ಎಂದು ಬೆಂಗಳೂರಿನ ರಾಬಿನ್‌ವುಡ್ ಆರ್ಮಿ ತಂಡದ ಮುಖ್ಯಸ್ಥೆ ಕೀರ್ತಿ ಠಾಕೋರಿಯಾ ಸಲಹೆ ನೀಡಿದರು.

ತಾಲ್ಲೂಕಿನ ಗೂಳೂರು ಹೋಬಳಿಯ ಕೇಂದ್ರ ಹಾಗೂ ಐವಾರಪಲ್ಲಿ ಗ್ರಾಮದ ಮಹಿಳೆಯರಿಗೆ ರಾಬಿನ್‌ವುಡ್ ಆರ್ಮಿ ತಂಡ ಹಾಗೂ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಡಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಹಾಗೂ ಕೂಲಿ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಆರೋಗ್ಯದ ಕಡೆಗೆ ಅರಿವು ಕಡಿಮೆ ಇರುತ್ತದೆ. ಮಹಿಳೆಯರು, ಹೆಣ್ಣುಮಕ್ಕಳು ಕೆಲಸದ ನಡುವೆಯೂ ಆರೋಗ್ಯದ ಬಗ್ಗೆ ಗಮನ ನೀಡಬೇಕು. ಆರೋಗ್ಯ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಏನೇ ಸಮಸ್ಯೆ ಇದ್ದರೂ, ಕೂಡಲೇ ವೈದ್ಯರ ಬಳಿ ಚರ್ಚಿಸಬೇಕು. ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ರಾಬಿನ್‌ವುಡ್ ಆರ್ಮಿಗೆ ಭಾರತ ಹಾಗೂ ವಿದೇಶಗಳಲ್ಲಿ ಸದಸ್ಯರಿದ್ದಾರೆ. ವಿವಿಧ ಕಂಪನಿಗಳಿಂದ ವಸ್ತುಗಳ ರೂಪದಲ್ಲಿ ದೇಣಿಗೆ ಪಡೆಯಲಾಗುತ್ತದೆ. ಅವುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹಂಚುವುದನ್ನು ಕಾಯಕ ಮಾಡಿಕೊಳ್ಳಲಾಗಿದೆ. ಮದುವೆ, ಸಭೆ, ಸಮಾರಂಭಗಳಲ್ಲಿ ಉಳಿದ ಆಹಾರವನ್ನು ನಿರ್ಗತಿಕರಿಗೆ, ಭಿಕ್ಷುಕರಿಗೆ, ಹಸಿದವರಿಗೆ ಹಂಚಿದ್ದೇವೆ ಎಂದರು.‌

‘ನಾವು ಹಣ ಸಂಗ್ರಹಿಸುವುದಿಲ್ಲ. ದೇಣಿಗೆ ಪಡೆಯುವುದಿಲ್ಲ. ಬದಲಿಗೆ ವಸ್ತುಗಳನ್ನು ಸಂಗ್ರಹಿಸಲಾಗುವುದು. ವಿವಿಧ ರಾಜ್ಯದ ಮಾಹಿತಿ ತಂತ್ರಜ್ಞಾನ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳು, ಅಧಿಕಾರಿಗಳು ನಮ್ಮ ತಂಡದಲ್ಲಿದ್ದಾರೆ. ನಾವೇ ಗ್ರಾಮಗಳಿಗೆ ತೆರಳಿ ವಸ್ತುಗಳನ್ನು ಹಂಚುವುದು ಸಂತಸ ತಂದಿದೆ’ ಎಂದು ಹೇಳಿದರು.

ಕರ್ನಾಟಕ ಪ್ರಾಂತ ಕೂಲಿಕಾರರ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ರಾಬಿನ್‌ವುಡ್ ಆರ್ಮಿ ತಂಡದ ಕಾರ್ಯ ಶ್ಲಾಘನೀಯ. ತಂಡದಿಂದ ಕೋವಿಡ್-19 ಸಂದರ್ಭದಲ್ಲಿ ತಾಲ್ಲೂಕಿನ ನಲ್ಲಗುಟ್ಲಪಲ್ಲಿ, ಪಾಳ್ಯಕೆರೆ ಪಂಚಾಯಿತಿಯ 2 ಸಾವಿರ ಕುಟುಂಬಗಳಿಗೆ ದಿನಸಿ ಪದಾರ್ಥ ವಿತರಿಸಲಾಗಿದೆ. ಇದೀಗ ಎಸ್ಎಪಿ ಕಂಪನಿಯಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ಸಂಗ್ರಹಿಸಿ ತಾಲ್ಲೂಕಿನ ಗೂಳೂರು, ಐವಾರಪಲ್ಲಿ ಗ್ರಾಮದ 400 ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ವಿತರಿಸಿದ್ದಾರೆ ಎಂದು ತಿಳಿಸಿದರು.

ರಾಬಿನ್‌ವುಡ್ ಆರ್ಮಿಯ ಕೇಶವ್ ಠಾಕೋರಿಯಾ, ಪ್ರಾಂತ ಕೂಲಿಕಾರರ ಸಂಘಟನೆಯ ಮುಖಂಡ ಎಂ.ಎನ್. ರಘುರಾಮರೆಡ್ಡಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಬಿ. ಸಾವಿತ್ರಮ್ಮ, ದಲಿತ ಹಕ್ಕುಗಳ ಸಮಿತಿಯ ಮುಖಂಡ ಮುನಿಚಂದ್ರ, ಐವಾರಪಲ್ಲಿ ಮುನಿಚಂದ್ರ, ಡಿವೈಎಫ್‌ಐ ಮುಖಂಡ ಹರೀಶ್, ಆಶಾ ಕಾರ್ಯಕರ್ತೆ ವರಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ತಿರುಮಲಕ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.