ADVERTISEMENT

ಚಿಂತಾಮಣಿ: ಸಂಕ್ರಾಂತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 6:49 IST
Last Updated 16 ಜನವರಿ 2026, 6:49 IST
ಚಿಂತಾಮಣಿಯ ರಾಜೀವ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ-ಸಂಭ್ರಮದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದ್ದರು
ಚಿಂತಾಮಣಿಯ ರಾಜೀವ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ-ಸಂಭ್ರಮದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿದ್ದರು   

ಚಿಂತಾಮಣಿ: ನಗರದ ರಾಜೀವ್ ಬಡಾವಣೆಯ ಸಿಟಿಜನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಗುರುವಾರ ಸಂಕ್ರಾಂತಿ ಸಂಭ್ರಮ, ಸಂಭ್ರಮದ ಸುಗ್ಗಿ ಹಬ್ಬವನ್ನು ವಿವಿಧ ಚಟುವಟಿಕೆಗಳ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು. ಮುಂಜಾನೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ವಿವಿಧ ಕಾರ್ಯಕ್ರಮ ನಡೆದವು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜೀವನಗರ ಬಡಾವಣೆಯ ರಸ್ತೆಗಳಿಗೆ ಬುಧವಾರವೇ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಂಗಳೂರು ರಸ್ತೆಯಿಂದ ಪ್ರವೇಶದ್ವಾರ, 30 ಅಡಿ ರಸ್ತೆ ಸೇರಿದಂತೆ ಬಡಾವಣೆಯ ವಿವಿಧ ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸಿತು.

ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು 30 ಅಡಿ ರಸ್ತೆಯಲ್ಲಿ ಬಣ್ಣ ಬಣ್ಣದ ಚಿತ್ತಾರಗಳಲ್ಲಿ ರಂಗೋಲಿ ಬಿಡಿಸಿದ್ದರು. ಮಡಿಕೆ ಒಡೆಯುವುದು, ಗೋಣಿ ಚೀಲದ ಓಟ, ಹಗ್ಗ ಜಗ್ಗಾಟ, ಲೆಮನ್ ಅಂಡ್ ಸ್ಪೂನ್ ನಡಿಗೆ, ಮ್ಯೂಜಿಕಲ್ ಚೇರ್, ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 

ADVERTISEMENT

ಅಸೋಸಿಯೇಷನ್ ವತಿಯಿಂದ ಪ್ರತಿ ತಿಂಗಳು ಸ್ವಚ್ಛತಾ ಕಾರ್ಯಕ್ರಮ, ದೇಶೀ ಸಂಸ್ಕೃತಿ ಮತ್ತು ಪರಂಪರೆ ಅರಿವು ಮೂಡಿಸುವ ಸಲುವಾಗಿ ಎಲ್ಲ ಹಬ್ಬಗಳನ್ನು ಸಾಮೂಹಿಕವಾಗಿ ಆಚರಣೆ ಮಾಡುತ್ತಿದ್ದೇವೆ. ಸ್ವಚ್ಛತೆ ಕಡೆಗೆ ನಮ್ಮ ನಡಿಗೆ ಎಂಬ ಘೋಷ ವಾಕ್ಯದೊಂದಿಗೆ 10 ವರ್ಷಗಳಿಂದ ಪ್ರತಿ ತಿಂಗಳು ಮೊದಲ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಕಾರ್ಯದರ್ಶಿ ಕೃಷ್ಣಾರೆಡ್ಡಿ ತಿಳಿಸಿದರು.

ಸಂಜೆ ತಮಟೆಯೊಂದಿಗೆ ಅಲಂಕೃತ ರಾಸುಗಳ ಮೆರವಣಿಗೆ ಹಾಗೂ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಿತು. ಕಿಚ್ಚು ಹಾಯಿಸುವ ಕಾರ್ಯಕ್ರಮ ಕುತೂಹಲ ಮೂಡಿಸಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ರಾತ್ರಿ 8.30 ಕೈವಾರದ ನಾಟ್ಯಾಂಜಲಿ ನೃತ್ಯ ಕಲಾ ಅಕಾಡೆಮಿ ನಾಟ್ಯ ಪ್ರದರ್ಶನ, ತುಮಕೂರು ಜ್ಯೋತಿ ಮೆಲೊಡೀಸ್‌ ತಂಡದಿಂದ ಸಂಕ್ರಾಂತಿ ಸುಗ್ಗಿ ಆರ್ಕೆಸ್ಟ್ರಾ ಸೊಗಸಾಗಿ ಮೂಡಿ ಬಂತು. 

ಪೌರಾಯುಕ್ತ ಜಿ.ಎನ್.ಚಲಪತಿ, ಸಿಟಿಜನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಶಂಕರರೆಡ್ಡಿ, ಪದಾಧಿಕಾರಿಗಳು, ಬಡಾವಣೆ ಮುಖಂಡರು ಭಾಗವಹಿಸಿದ್ದರು.

ಚಿಂತಾಮಣಿಯ ರಾಜೀವ್ ನಗರದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ-ಸಂಭ್ರಮದಲ್ಲಿ ಭಾಗವಹಿಸಿದ್ದ ಪುಟಾಣಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.