
ಕೈವಾರ: ಕೈವಾರದಲ್ಲಿ ಗುರುವಾರ ಮಕರ ಸಂಕ್ರಾಂತಿ ಪ್ರಯುಕ್ತ ಯೋಗಿನಾರೇಯಣ ಮಠ, ಅಮರನಾರೇಯಣ ದೇವಾಲಯ, ಭೀಮಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಹಾಗೂ ನೆರೆಹೊರೆಯ ರಾಜ್ಯಗಳು ಸೇರಿದಂತೆ ವಿವಿಧೆಡೆಗಳಿಂದ ವಾಹನಗಳಲ್ಲಿ ಆಗಮಿಸಿದ್ದ ಭಕ್ತರು ದೇವಾಲಯಗಳಿಗೆ ಎಡತಾಕುತ್ತಿದ್ದರು. ಸರತಿಯ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದರು.
ಸಂಕ್ರಾಂತಿಯ ಸಂದರ್ಭದಲ್ಲಿ ಯೋಗಿನಾರೇಯಣ ಯತೀಂದ್ರರಿಗೆ ಮಾಲೆಯನ್ನು ಹಾಕುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿವರ್ಷ ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಆಂಧ್ರಪ್ರದೇಶ ಕದಿರಿ, ಧರ್ಮಾವರಂ, ರಾಜ್ಯದ ಆನೇಕಲ್, ಮಾಲೂರು ಕಡೆಗಳಿಂದ ಭಕ್ತರು ಮಾಲೆ ಧರಿಸಿ, ಸಂಕೀರ್ತನಾ ಪಾದಯಾತ್ರೆಯ ಮೂಲಕ ಕೈವಾರಕ್ಕೆ ಆಗಮಿಸುತ್ತಾರೆ. ಈ ಬಾರಿಯೂ ಮಾಲಾಧಾರಿಗಳು ಮಠಕ್ಕೆ ಬಂದು ತಾತಯ್ಯರ ಸೇವೆಯಲ್ಲಿ ಪಾಲ್ಗೊಂಡಿದ್ದರು. ಆನೇಕಲ್‌ನ ಚಿಕ್ಕತಿಮ್ಮಸಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಮಾಲೆ ಧರಿಸಿ ಕೈವಾರಕ್ಕೆ ಆಗಮಿಸಿದ್ದರು.
ಸಂಕ್ರಾಂತಿ ಹಬ್ಬದಂದು ತಾತಯ್ಯರ ಮಠದ ದೇವಾಲಯದ ಪ್ರಾಕಾರೋತ್ಸವದಲ್ಲಿ ಭಕ್ತರು ಭಾಗವಹಿಸಿದ್ದರು. ತಾತಯ್ಯರ ಬೃಂದಾವನದಲ್ಲಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಮಾಲಾಧಾರಿಗಳು ಮಠದ ಆವರಣದಲ್ಲಿ ಸಂಕೀರ್ತನಾ ಭಜನೆ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗೋಪೂಜೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಜನರು ರಾಸುಗಳನ್ನು ಸಿಂಗರಿಸಿ ಮಠಕ್ಕೆ ಕರೆತಂದು ಪೂಜೆ ಸಲ್ಲಿಸಿದರು. ಯತೀಂದ್ರರ ಮಾಲಾಧಾರಿಗಳಾಗಿದ್ದ ಭಕ್ತರು ಕೈವಾರದ ಪ್ರಮುಖ ರಸ್ತೆಗಳಲ್ಲಿ ಸಂಕೀರ್ತನೆಯೊಂದಿಗೆ ಭಜನೆಯಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.