
ಚಿಂತಾಮಣಿ: ಗುರುವಾರ ನಗರ ಹಾಗೂ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಸಂಕ್ರಾಂತಿ ಆಚರಿಸಲಾಯಿತು.
ನಗರದ 31ನೇ ವಾರ್ಡ್ ತಿಮ್ಮಸಂದ್ರದಲ್ಲಿ ಮಹಿಳೆಯರಿಂದ ದೀಪೋತ್ಸವ, ರಾಸುಗಳ ಮೆರವಣಿಗೆ ನಡೆಯಿತು.
ಮನೆಗಳಲ್ಲಿ ಮಹಿಳೆಯರು ಬೆಳಿಗ್ಗೆ ಎಳ್ಳೆಣ್ಣೆಸ್ನಾನ ಮಾಡಿ, ತಳಿರು ತೋರಣಗಳಿಂದ ಸಿಂಗರಿಸುವುದು, ಮನೆಗಳ ಮುಂದೆ ರಂಗೋಲಿ ಬಿಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಜನರು ಮನೆಗಳಲ್ಲಿ ಪೂಜೆ, ಗೋಪೂಜೆ ಮಾಡಿದರು. ಎಳ್ಳು, ಕಡಲೆಬೀಜ, ಕೊಬ್ಬರಿ ಅಚ್ಚುಬೆಲ್ಲ, ಸಕ್ಕರೆ ಅಚ್ಚು, ಹುರಿಗಡಲೆ ಸೇರಿಸಿ ತಯಾರಿಸಿದ್ದ ಎಳ್ಳು-ಬೆಲ್ಲ ಮತ್ತು ನವಧಾನ್ಯಗಳನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿದರು.
ಸಂಜೆ ಮಹಿಳೆಯರು ಹೊಸ ಉಡುಗೆಗಳೊಂದಿಗೆ ಮನೆ ಮನೆಗೂ ತೆರಳಿ ಎಳ್ಳು ಬೀರಿದರು. ಕೆಲವು ಕಡೆ ಸಂಘ ಸಂಸ್ಥೆಗಳಿಂದ ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿತ್ತು.
ದನಕರುಗಳನ್ನು ತೊಳೆದು ಸಿಂಗಾರ ಮಾಡಿ ಪೂಜಿಸಿ ಮೆರವಣಿಗೆ ಮಾಡಿದರು. ಸಂಜೆ ಬೆಂಕಿ ಮೇಲೆ ಹಾಯಿಸಿರುವುದು, ಯುವಜನರು ಬೆಂಕಿಯ ಪಂಜು ಭರಾಟೆಗಳನ್ನು ತಿರುಗಿಸುವುದರ ಮೂಲಕ ಸಂಭ್ರಮಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.