ಪ್ರಜಾವಾಣಿ ವಾರ್ತೆ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯ ಜನರನ್ನು ಹೊಂದಿರುವ ರಾಜಸ್ಥಾನ ಮೂಲದ ಜಾತಿಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಪತ್ತೆಯಾಗಿದೆ. ಮೂಲದ ಪ್ರಕಾರ ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಈ ಜಾತಿಯ ಜನರು ಇಲ್ಲ ಎಂದು ಗೊತ್ತಾಗಿದೆ.
ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ‘ಸರ್ಬಿ’ ಜಾತಿಗೆ ಸೇರಿದ ಎರಡು ಕುಟುಂಬ ಸಮೀಕ್ಷೆಯಲ್ಲಿ ಕಂಡುಬಂದಿವೆ. ಈ ಎರಡು ಕುಟುಂಬಗಳಲ್ಲಿ ಒಟ್ಟು ಏಳು ಸದಸ್ಯರು ಇದ್ದಾರೆ.
ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರನ್ನು ಹೊಂದಿರುವ ಜಾತಿಯೂ ಇದಾಗಿದೆ. ಹಿಂದುಳಿದ ವರ್ಗಗಳ ಆಯೋಗವು ಹೊರಡಿಸಿರುವ ಸಮೀಕ್ಷೆಯ ಜಾತಿಗಳ ಪಟ್ಟಿಯಲ್ಲಿ ‘ಸರ್ಬಿ’ ಜಾತಿಯ ಹೆಸರು ಇಲ್ಲ.
ಈ ಜಾತಿ ಕೋಡ್ ಸಹ ಇಲ್ಲ. ಈ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಯಾವ ಪಟ್ಟಿಯಲ್ಲಿ ‘ಸರ್ಬಿ’ ಜಾತಿ ನಮೂದಿಸಬೇಕು ಎಂದು ಜಿಲ್ಲಾಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆಯೋಗಕ್ಕೆ ಪತ್ರ ಬರೆದಿತ್ತು. ಆಯೋಗವು ‘ಸರ್ಬಿ’ ಜಾತಿಯನ್ನು ಇತರ ಕಾಲಂನಲ್ಲಿ ನಮೂದಿಸುವಂತೆ ತಿಳಿಸಿದೆ.
‘ಸರ್ಬಿ ಜಾತಿ ರಾಜಸ್ಥಾನ ಮೂಲದ್ದು ಎನ್ನಲಾಗುತ್ತಿದೆ. ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲಿ ಈ ಜಾತಿಯ ಜನರು ಇಲ್ಲ. ಸಮೀಕ್ಷೆ ಜಾತಿಯ ಪಟ್ಟಿಯಲ್ಲಿ ಇದರ ಹೆಸರು ಇರಲಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದೆವು. ಇತರೆ ಕಾಲಂನಲ್ಲಿ ನಮೂದಿಸಲು ತಿಳಿಸಿದ್ದಾರೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮುನಿರತ್ನಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಂಚೇಹಳ್ಳಿಯಲ್ಲಿ ಸಮೀಕ್ಷೆಗೆ ಒಳಪಟ್ಟಿರುವ ಒಂದು ಕುಟುಂಬದಲ್ಲಿ ನಾಲ್ವರು, ಮತ್ತೊಂದು ಕುಟುಂಬದಲ್ಲಿ ಮೂವರಿದ್ದಾರೆ. ಎಲ್ಲ ಮನೆಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು ಎಂದು ಸರ್ಕಾರ ನಿರ್ದೇಶಿಸಿದೆ. ಸರ್ಬಿ ಜಾತಿ ಜನರ ದಾಖಲೆಗಳ ಆಧಾರದಲ್ಲಿ ಅವರನ್ನೂ ಸಮೀಕ್ಷೆ ನಡೆಸಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.