ಚೇಳೂರು: ತಾಲ್ಲೂಕಿನ ಸೀತಿರಡ್ಡಿಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಲಿಟ್ಟರೆ ಸಾಕು ಸುತ್ತಲೂ ಹಸಿರು, ಗುಣಮಟ್ಟದ ಆಹಾರ, ಕಲಿಕೆಗೆ ಒತ್ತು ಕೊಡುವ ಚಿತ್ರಣ ಕಂಡುಬರುತ್ತದೆ.
1978ರಲ್ಲಿ ಈ ಶಾಲೆ ಪ್ರಾರಂಭವಾಯಿತು. ಅದೂ ಇದೇ ಗ್ರಾಮದ ಗೆಂಗಿರೆಡ್ಡಿ ಮತ್ತು ವೆಂಕಟರಮಣಾರೆಡ್ಡಿ ಕುಟುಂಬದವರಿಂದ ಶಾಲೆಗೆ ಭೂಮಿಯನ್ನು ದಾನವಾಗಿ ನೀಡಿದ್ದು, ಕ್ರಮೇಣ ಗ್ರಾಮಸ್ಥರ ಸಹಕಾರದಿಂದ ಶಾಲೆ ನಿಭಾಯಿಕೊಂಡು ಬಂದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವೂ ಸಿಗುತ್ತಿದೆ.
ಕಲಿಕೆಗೆ ಒತ್ತು: ಪ್ರಸಕ್ತ ಸಾಲಿನಲ್ಲಿ ಒಟ್ಟು 1ರಿಂದ 5ನೇ ತರಗತಿವರೆಗೆ 16 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕರು ಸೇರಿ ಒಟ್ಟು ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯ ಮಕ್ಕಳಿಗೆ ಸ್ವ ಕಲಿಕೆಗೆ ಒತ್ತು ನೀಡಲಾಗಿದೆ. ಪರಿಸರದ ಬಗ್ಗೆ, ವಿಜ್ಞಾನ, ವ್ಯಾಕರಣ, ಆಕೃತಿಗಳು, ಇಂಗ್ಲಿಷ್ ವ್ಯಾಕರಣ ಜತೆಗೆ ಮಕ್ಕಳಿಗೆ ರಾಷ್ಟ್ರ ನಾಯಕರ ಪುಸ್ತಕಗಳನ್ನು ನೀಡಿ, ಬೋಧಿಸಲಾಗುತ್ತಿದೆ.
ತಾಲ್ಲೂಕಿನ ಖಾಸಗಿ ಶಾಲೆಗಳ ಪ್ರಭಾವದಿಂದ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯು ಗಣನೀಯ ಪ್ರಮಾಣದ ಮಕ್ಕಳ ಇಳಿಕೆಯಾಗುತ್ತಿವೆ. ಶಿಕ್ಷಕರು ಎಷ್ಟೇ ನುರಿತ ರಾದರೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ವ್ಯಾಮೋಹದಿಂದ ಪೋಷಕರು ತಮ್ಮ ಮಕ್ಕಳನ್ನು ಪಟ್ಟಣದ ವಿದ್ಯಾಸಂಸ್ಥೆಗಳಿಗೆ ದಾಖಲಿಸುತ್ತಿರುವುದು ಶಿಕ್ಷಕರಿಗೆ ದಾಖಲಾತಿ ವಿಚಾರದಲ್ಲಿ ಸವಾಲಾಗಿದೆ.
ವಿದ್ಯಾರ್ಥಿಗಳು, ತಮ್ಮ ಶಾಲೆಯಲ್ಲಿ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡುವ ಮೂಲಕ ಶಾಲೆ ಆವರಣವನ್ನು ಹಚ್ಚ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.
ಇಲ್ಲಿನ ಶಾಲೆಯಲ್ಲಿ ಕಟ್ಟಡಗಳು ಶಿಥಿಲವಾಗಿದೆ. ಪ್ರಸ್ತುತ ಸಾಲಿನಲ್ಲಿ ಸರ್ಕಾರದಿಂದ ಗ್ರಾಮಕ್ಕೆ ಹೊಂದಿಕೊಂಡಂತೆ ನೂತನವಾಗಿ ಬೇರೊಂದು ಸ್ಥಳದಲ್ಲಿ ನೂತನ ಶಾಲಾ ಕೊಠಡಿ ನಿರ್ಮಿಸಲಾಗಿದೆ. ವಾತಾವರಣ ಸುಂದರವಾಗಿ ಕಂಗೊಳಿಸುವ ರೀತಿಯಲ್ಲಿದೆ. ಸುತ್ತಲೂ ಗಿಡಮರಗಳ ನೆಲೆಯಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ರೀತಿಯಲ್ಲಿ ಅನುಕೂಲಕರ ವಾತಾವರಣ ಹೊಂದಿದೆ ಎಂದು ಗ್ರಾಮಸ್ಥರು ತಿಳಿಸಿದರು.
Quote - ಮಕ್ಕಳ ಕಲಿಕೆಗೆ ಆದ್ಯತೆ ನೀಡುತ್ತಿದ್ದು ಗ್ರಾಮದ ಎಲ್ಲರ ಸಹಕಾರದೊಂದಿಗೆ ಶಾಲೆ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ. ದಾನಿಗಳಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿ ನೀಡುತ್ತಿರುವುದು ಸಂತಸವಾಗಿದೆ. ಎಸ್.ಕೇಶವರೆಡ್ಡಿ ಪ್ರಭಾರಿ ಮುಖ್ಯ ಶಿಕ್ಷಕ ಸೀತಿರೆಡ್ಡಿಪಲ್ಲಿ ಸರ್ಕಾರಿ ಶಾಲೆ
Quote - ಪೋಷಕರ ಸಹಾಯದಿಂದ ಮಕ್ಕಳಿಗೆ ಕಲಿಕಾಸಾಮಗ್ರಿ ಪ್ರತಿವರ್ಷ ನೀಡುತ್ತೇವೆ. ಶಾಲೆಯಿಂದ ಪ್ರತಿವರ್ಷ ನವೋದಯ ಮೊರಾರ್ಜಿ ಕಿತ್ತೂರು ಶಾಲೆಗಳಿಗೆ ಆಯ್ಕೆ ಆಗುತ್ತಿದ್ದಾರೆ ಎ.ನರೇಶ್ ಸಹ ಶಿಕ್ಷಕ
Quote - ಆಟ ಪಾಠಗಳೊಂದಿಗೆ ಪ್ರತಿನಿತ್ಯವೂ ಕಲಿಸುತ್ತಾರೆ. ಪಾಠವನ್ನು ಶಿಕ್ಷಕರು ಉತ್ತಮವಾಗಿ ಮಾಡುವುದು ನಮಗೆ ಸಂತೋಷದಾಯಕ ಭರತ್ ಐದನೇ ತರಗತಿ
Quote - ನಮ್ಮ ಶಾಲೆಯ ವಾತಾವರಣ ಸುಂದರವಾಗಿದ್ದು ಪ್ರತಿದಿನ ಖುಷಿಯಿಂದ ಶಾಲೆಗೆ ಬರುತ್ತೇವೆ. ಇಲ್ಲಿ ಸ್ವಚ್ಛತೆ ವಿದ್ಯೆಗೆ ಮೊದಲ ಆದ್ಯತೆ ನೀಡುತ್ತಾರೆ ತೇಜಶ್ರೀ ಐದನೇ ತರಗತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.