ADVERTISEMENT

ಶಿಡ್ಲಘಟ್ಟ: ಕಲಿಕಾ ಹಬ್ಬ, ವಿಜ್ಞಾನ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 13:53 IST
Last Updated 19 ಫೆಬ್ರುವರಿ 2025, 13:53 IST
ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳ ವೇಷ ಭೂಷಣ 
ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಹಬ್ಬ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳ ವೇಷ ಭೂಷಣ    

ಶಿಡ್ಲಘಟ್ಟ: ತಾಲ್ಲೂಕಿನ ಹೊಸಪೇಟೆಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಎಫ್ಎಲ್ಎನ್ ಕಲಿಕಾ ಹಬ್ಬ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಯಿತು. 

ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ‘ವಿದ್ಯಾರ್ಥಿಯು ಪರೀಕ್ಷೆಯಲ್ಲಿ ತಾನು ಉತ್ತೀರ್ಣನಾದ ಹೊರತಾಗಿಯೂ ಬುನಾದಿ ಸಾಮರ್ಥ್ಯ ಗಳಿಕೆಯಲ್ಲಿ ಹಿನ್ನಡೆ ಹೊಂದಿದ್ದರೆ, ಅದು ಆಯಾ ತರಗತಿ ಮಟ್ಟದ ಕಲಿಕೆ ಸಾಧಿಸಲು ತೊಡಕಾಗುತ್ತದೆ. ರಾಷ್ಟ್ರಮಟ್ಟದಲ್ಲಿ ನಡೆದ ಬೇರೆ-ಬೇರೆ ಸಮೀಕ್ಷೆಗಳು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದಲ್ಲಿನ ಕೊರತೆ ಬಗ್ಗೆ ಮಾಹಿತಿ ನೀಡುತ್ತಲೇ ಇವೆ. ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಗಳಿಕೆಯು ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಬಹುಮುಖ್ಯ ಘಟ್ಟ’ ಎಂದು ಹೇಳಿದರು. 

ನಮ್ಮ ದೇಶ ಮತ್ತು ರಾಜ್ಯದಲ್ಲಿ ಮಕ್ಕಳ ಹಂತದಲ್ಲಿ ಕಲಿಕಾ ಕೊರತೆ ಮತ್ತು ದೋಷಗಳ ಸವಾಲು ನಿರ್ವಹಿಸಲು ಅನೇಕ ರೀತಿಯ ಶೈಕ್ಷಣಿಕ ಪ್ರಯತ್ನಗಳು ನಡೆದಿವೆ. ಆದಾಗ್ಯೂ, ಇನ್ನೂ ಈ ನಿಟ್ಟಿನಲ್ಲಿ ಸಾಧಿಸಬೇಕಿರುವುದು ಬಹಳಷ್ಟಿದೆ ಎಂದರು. 

ADVERTISEMENT

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮಕ್ಕಳನ್ನು ಕಲಿಕಾ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿ ಸಂತೋಷದಾಯಕ ಕಲಿಕೆಗೆ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸಬೇಕು. 2024–25ನೇ ಶೈಕ್ಷಣಿಕ ವರ್ಷವನ್ನು ಇಲಾಖೆಯು ‘ಶೈಕ್ಷಣಿಕ ಬಲವರ್ಧನೆ ವರ್ಷ’ ಎಂದು ಘೋಷಿಸಿದ್ದು, ಈ ವರ್ಷ ಶೈಕ್ಷಣಿಕ ಚಟುವಟಿಕೆಗಳೆಲ್ಲವೂ ಇದರ ಅನುಗುಣವಾಗಿಯೇ ನಡೆಯಲಿವೆ. ಈ ಪೈಕಿ ಕಲಿಕಾ ಹಬ್ಬವೂ ಒಂದಾಗಿದೆ ಎಂದರು. 

ಸಿಆರ್‌ಪಿ ಎಂ.ರಮೇಶ್‌ಕುಮಾರ್ ಮಾತನಾಡಿ, ಎಫ್ಎಲ್ಎನ್ ಅಭಿಯಾನವು ಮಕ್ಕಳಲ್ಲಿ ಬುನಾದಿ ಸಾಮರ್ಥ್ಯ ಗಳಿಕೆ ಖಾತ್ರಿಪಡಿಸಲು ಒಂದು ಮಹತ್ತರ ಹೆಜ್ಜೆಯಾಗಿದೆ ಎಂದರು.

ಮುಖ್ಯ ಶಿಕ್ಷಕಿ ಜಿ.ಎನ್.ನೇತ್ರಾವತಿ ಮಾತನಾಡಿ, ಬುನಾದಿ ಸಾಮರ್ಥ್ಯ ಗಳಿಕೆಗಾಗಿ ತರಗತಿ ಪ್ರಕ್ರಿಯೆಯನ್ನು ಅನುಕೂಲಗೊಳಿಸಲು ಕಲಿಕಾ ಹಬ್ಬದಂತಹ ಚಟುವಟಿಕೆಗಳು ಶಿಕ್ಷಕರಿಗೆ ನೆರವಾಗಲಿವೆ. ಶಿಕ್ಷಕರು ಭಾಷೆ ಮತ್ತು ಗಣಿತ ತರಗತಿಗಳನ್ನು ನಿರ್ವಹಿಸುವಾಗ ಮಕ್ಕಳ ಸಾಮರ್ಥ್ಯ ವರ್ಧನೆಗೆ ಪ್ರಯತ್ನಿಸಬೇಕು ಎಂದರು.

ವಿದ್ಯಾರ್ಥಿಗಳಿಗಾಗಿ ಗಟ್ಟಿ ಓದು, ಶುದ್ಧ ಬರಹ, ಸರಳ ಗಣಿತ, ಕತೆ, ಜ್ಞಾಪಕ ಸ್ಪರ್ಧೆಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಎನ್.ಶೈಲಜ ಮಾರ್ಗದರ್ಶನದಲ್ಲಿ ಮಕ್ಕಳು ತಯಾರಿಸಿದ ವಿಜ್ಞಾನ ಪ್ರಯೋಗ, ಮಾದರಿಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಎಸ್‌ಡಿಎಂಸಿ ಅಧ್ಯಕ್ಷ ಎಚ್.ಸಿ.ಆಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ದ್ಯಾವಮ್ಮ ಕೆಂಪಣ್ಣ, ಮುಖ್ಯಶಿಕ್ಷಕಿ ಪಿ.ಗೀತಾ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.