ಶಿಡ್ಲಘಟ್ಟ: ಜನತೆ ಮೂಢನಂಬಿಕೆಗಳ ಹಿಂದೆ ಬೀಳದೆ, ವಿಜ್ಞಾನದ ಬೆನ್ನು ಹತ್ತಬೇಕು. ವಿಜ್ಞಾನದಲ್ಲಿ ಜಗತ್ತಿನ ಎಲ್ಲಾ ಪ್ರಶ್ನೆಗಳಿಗೂ ಖಚಿತ ಉತ್ತರಗಳಿವೆ ಎಂದು ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ತಿಳಿಸಿದರು.
ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಿಯವರೆಗೆ ಮನುಷ್ಯ ಮಾಯ, ಮಂತ್ರ, ಅರ್ಥವಿಲ್ಲದ ಆಚರಣೆಗಳಿಗೆ ಜೋತು ಬೀಳುತ್ತಾನೋ ಅಲ್ಲಿಯವರೆಗೆ ತಾನೂ ಉದ್ಧಾರವಾಗುವುದಿಲ್ಲ ಮತ್ತು ಆ ಸಮಾಜವೂ ಉದ್ಧಾರವಾಗುವುದಿಲ್ಲ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯೊಂದಿಗೆ ಕಲಿಯಬೇಕು. ವಿದ್ಯಾರ್ಥಿಗಳು ಮೊಬೈಲ್ ಅನ್ನು ಅಗತ್ಯವಿರುವಷ್ಟೇ ಬಳಸಬೇಕು. ಕೃತಕ ಬುದ್ಧಿಮತ್ತೆಯನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತನ್ನ ವಿರೋಧಿಗಳ ಬದುಕನ್ನು ಬೆತ್ತಲಾಗಿಸುವಷ್ಟು ಅಪಾಯಕಾರಿಯಾಗಿ ಬಳಸಿಕೊಳ್ಳುತ್ತಿರುವುದು ಈ ಶತಮಾನದ ಅತಿ ದೊಡ್ಡ ದುರಂತ. ಮನುಷ್ಯ ತಂತ್ರಜ್ಞಾನವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೇ ವಿನಃ, ತಾನು ತಂತ್ರಜ್ಞಾನದ ಕಪಿಮುಷ್ಠಿಗೆ ಸಿಲುಕಿಕೊಳ್ಳಬಾರದು ಎಂದರು.
ಡಾಲ್ಫಿನ್ಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮಾತನಾಡಿ, ಪಿಯುಗೆ ಪ್ರವೇಶಿಸುವುದು ಎಂದರೆ ಬಾಲ್ಯವನ್ನು ದಾಟುವುದು ಎಂದರ್ಥ. ನಿಜವಾದ ಸವಾಲುಗಳು ಮಕ್ಕಳಿಗೆ ಮತ್ತು ಪೋಷಕರಿಗೆ ಇಬ್ಬರಿಗೂ ಎದುರಾಗುವುದು ಈ ಹಂತದಿಂದ. ಹಾಗಾಗಿ ವಿದ್ಯಾರ್ಥಿಗಳು ಎಷ್ಟು ಎಚ್ಚರಿಕೆ ವಹಿಸಬೇಕೋ ಅದಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ಪೋಷಕರು ವಹಿಸಬೇಕು. ಪೋಷಕರ ನಿರ್ಲಕ್ಷದಿಂದಾಗಿ ಇಂದಿನ ಬಹುತೇಕ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ದುಶ್ಚಟಗಳಿಂದ ದೂರವಿರುವ ಮನೋಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.
ಪ್ರಾಂಶುಪಾಲ ಡಾ.ಎನ್.ಶ್ರೀನಿವಾಸಮೂರ್ತಿ ಮಾತನಾಡಿ, ಹೆತ್ತವರು ಮಕ್ಕಳಿಗಾಗಿ ನಿತ್ಯ ಅರ್ಧ ಗಂಟೆಯಾದರೂ ಸಮಯ ಕೊಟ್ಟಾಗ ಮಕ್ಕಳು ಎಚ್ಚರಿಕೆಯಿಂದಿರುತ್ತಾರೆ. ನಿತ್ಯ ಅವರೊಂದಿಗೆ ಸಂವಾದಕ್ಕಿಳಿಯಬೇಕು. ತಾನು ಅಂದುಕೊಂಡ ಗುರಿಯನ್ನು ತಲುಪುವುದಷ್ಟೇ ಸಾಧನೆಯಾಗುವುದಿಲ್ಲ, ಅದರ ಜೊತೆ ಜೊತೆಗೆ ಅಶಕ್ತರನ್ನೂ ಶಕ್ತರಾಗಿಸುವ ಪ್ರಯತ್ನ ಮಾಡಬೇಕು. ನಾಲ್ಕು ಗೋಡೆಗಳ ನಡುವಿನ ಪಾಠ ಮಾತ್ರವೇ ಎಂದಿಗೂ ಶಿಕ್ಷಣವೆನಿಸಿಕೊಳ್ಳುವುದಿಲ್ಲ. ಬದಲಿಗೆ ಸಮಾಜದ ನಾಲ್ಕು ಮುಖಗಳ ನಡುವೆ ವ್ಯವಹರಿಸುವಂತಹ, ಸಮಾಜದ ಸವಾಲುಗಳನ್ನು ಎದುರಿಸುವಂತಹ ಜ್ಞಾನ ಮತ್ತು ಕೌಶಲ್ಯಗಳನ್ನು ಮಕ್ಕಳಿಗೆ ತುಂಬುವುದೇ ನಿಜವಾದ ಶಿಕ್ಷಣ ಎನಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಡಾಲ್ಫಿನ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಂದನಾ ಅಶೋಕ್ ಮಾತನಾಡಿ, ಏಕಾಗ್ರತೆ, ದೃಢ ಸಂಕಲ್ಪ, ಸತತ ಪ್ರಯತ್ನ ವಿದ್ಯಾರ್ಥಿಗಳನ್ನು ಯಾವ ಹಂತಕ್ಕಾದರೂ ಕೊಂಡೊಯ್ಯುತ್ತವೆ. ತನ್ನೊಳಗಿನ ಸಾಮರ್ಥ್ಯವನ್ನು ತಾನು ಅರಿತವನು ಹನುಮಂತನಂತೆ ತನ್ನ ಗುರಿಯೆಡೆಗೆ ಹಾರಬಲ್ಲ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾದಿ ತಪ್ಪದಂತೆ, ತಮ್ಮ ಗುರಿಯಿಂದ ವಿಮುಖರಾಗದಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಡಿಸಿಸಿ ಬ್ಯಾಂಕ್‌ನ ನೂತನ ನಿರ್ದೇಶಕ ಮತ್ತು ಡಾಲ್ಫಿನ್ಸ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ನಾಗರಾಜು ಅವರನ್ನು ಸನ್ಮಾನಿಸಲಾಯಿತು.
ಡಾ.ರಾಜೇಂದ್ರ ಕುಮಾರ್, ಸುದರ್ಶನ್, ಆರಿಫ್ ಅಹಮದ್, ಮುನಿಕೃಷ್ಣ, ಎಂ.ಎಚ್.ನಾಗೇಶ್, ಸಂಪತ್, ಜಾನಕಿ ರಾಮ್, ವಿನಯ್, ಗಜೇಂದ್ರ, ಖದೀರ್, ಸಂತೋಷ್, ನಾಗೇಶಯ್ಯ, ಪ್ರವೀಣ್, ನಾಗೇಶ್, ಮಂಜುನಾಥ, ಪ್ರೊ.ಶೃತಿ, ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.