ADVERTISEMENT

ಅ.2ರ ವರೆಗೆ ಸೇವಾ ಸಪ್ತಾಹ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 12:03 IST
Last Updated 17 ಸೆಪ್ಟೆಂಬರ್ 2020, 12:03 IST

ಚಿಕ್ಕಬಳ್ಳಾಪುರ: ‘ಬಿಜೆಪಿ ವತಿಯಿಂದ ಸೇವಾ ಹೀ ಸಂಘಟನೆ ಎಂಬ ಪರಿಕಲ್ಪನೆಯಲ್ಲಿ ಸೆಪ್ಟೆಂಬರ್ 14 ರಿಂದ ಅ‌ಕ್ಟೋಬರ್ 2ರ ವರೆಗೆ ವಿವಿಧ ರೀತಿಯ ಸೇವಾ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಸೇವಾ ಸಪ್ತಾಹ ಆಚರಿಸಲಾಗುತ್ತದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸಂಸ್ಥಾಪಕ ಪಂಡಿತ್ ದೀನ್ ದಯಾಳ್
ಉಪಾಧ್ಯಾಯ ಮತ್ತು ಮಹಾತ್ಮಾ ಗಾಂಧಿ ಜಯಂತಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 70ನೇ ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಹ ಪಕ್ಷದ ಕಾರ್ಯಕರ್ತರು ಬಗೆಬಗೆಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಜಿಲ್ಲೆಯ ಪ್ರತಿ ಮಂಡಲ ವ್ಯಾಪ್ತಿಯಲ್ಲಿ 70 ಅಂಗವಿಕಲರಿಗೆ ಕೃತಕ ಅಂಗ ಜೋಡಣೆ, 70 ಮಂದಿಗೆ ಕನ್ನಡಕ ವಿತರಣೆ, ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದರು.

ADVERTISEMENT

‘ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ದಾನ, ಪಕ್ಷದ ಕಾರ್ಯಕರ್ತರಿಂದ ರಕ್ತದಾನ ಶಿಬಿರ, ಪ್ರತಿ ಬೂತ್‌ನಲ್ಲಿ ವೃಕ್ಷಾರೋಪಣ ಕಾರ್ಯಕ್ರಮ. ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ಸ್ವಚ್ಛತಾ ಅಭಿಯಾನ, ಪ್ಲಾಸ್ಟಿಕ್ ನಿಷೇಧ ಸಂಕಲ್ಪದ ಕಾರ್ಯಕ್ರಮಗಳು, ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಹೇಳಿದರು.

‘ಸ್ವಾವಲಂಬಿ ಜೀವನಕ್ಕಾಗಿ ಮೋದಿ ಅವರು ಜಾರಿಗೆ ತಂದ ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಮನೆ ಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಆತ್ಮನಿರ್ಭರ ಪ್ಯಾಕೇಜ್‍ನ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ವೆಬಿನಾರ್ ಸಭೆಗಳ ಮೂಲಕ ವಿಷಯ ತಜ್ಞರರಿಂದ ಉಪನ್ಯಾಸ ಕಾರ್ಯಕ್ರಮ ನಡೆಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮರಳಕುಂಟೆ ಕೃಷ್ಣ ಮೂರ್ತಿ, ವಕ್ತಾರ ಸಂದಿಪ್ ರೆಡ್ಡಿ, ಕಾರ್ಯಾಲಯ ಕಾರ್ಯದರ್ಶಿ ಲಕ್ಷ್ಮಿಪತಿ, ಕಾರ್ಯದರ್ಶಿ ಅಶೋಕ್, ಹಿರಿಯ ಮುಖಂಡ ನರಸಪ್ಪ, ಮಾಧ್ಯಮ ಪ್ರಮುಖ್ ವಿ. ಮಧುಚಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.