
ಶಿಡ್ಲಘಟ್ಟ: ನಗರದ ಅಗ್ರಹಾರ ಬೀದಿಯಲ್ಲಿರುವ ಪುರಾತನ ಕಲ್ಯಾಣಿ ಶಾಮಣ್ಣಬಾವಿಯನ್ನು ಸ್ಥಳೀಯ ಯುವಕರು ಶ್ರಮದಾನ ಮಾಡುವ ಮೂಲಕ ಶುಚಿಗೊಳಿಸಿದ್ದಾರೆ.
ಅಗ್ರಹಾರ ಬೀದಿಯಲ್ಲಿದ್ದ ಶಾಮಣ್ಣ ಎಂಬುವರು ಸುಮಾರು 350 ವರ್ಷಕ್ಕೂ ಹಿಂದೆ ಇಲ್ಲಿನ ದೇವಾಲಯದ ಬಳಿ ಚತುಷ್ಕೋನ ಆಕಾರದ ಕಲ್ಯಾಣಿ ನಿರ್ಮಿಸಿದ್ದರು. ಇದರಿಂದಾಗಿ ಇದು ಶಾಮಣ್ಣಬಾವಿಯೆಂದೇ ಪ್ರಸಿದ್ಧಿ ಪಡೆದಿದೆ.
ಇಲ್ಲಿ ಸದಾ ಶುದ್ಧವಾದ ನೀರಿರುತ್ತಿತ್ತು. ಒಂದೆಡೆ ವಿಶಾಲ ಅರಳಿಮರವಿರುವ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ದೇವಾಲಯವಿದೆ. ವಿಷ್ಣು ಮತ್ತು ಶಿವ ದೇಗುಲ ಒಂದೇ ಕಡೆ ಕಾಣಸಿಗದು. ಆದರೆ ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮಿನರಸಿಂಹಸ್ವಾಮಿ ದೇವಾಲಯವಿದೆ. ಜೊತೆಗೆ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರ ಮೂರ್ತಿಗಳಿವೆ.
ಶಾಮಣ್ಣ ಬಾವಿಯ ಸುತ್ತ ಅರಳಿ ಮರಗಳು, ಹುಣಸೆ, ತೆಂಗು, ಹೊಂಗೆ ಮುಂತಾದ ಮರಗಳಿದ್ದು, ಅತ್ಯಂತ ಪ್ರಶಾಂತವಾದ ಸುಂದರ ತಾಣವಾಗಿದೆ. ಹಿಂದೆ ಸದಾಕಾಲ ನೀರಿರುತ್ತಿದ್ದ ಈ ಶಾಮಣ್ಣಬಾವಿಯು ನಗರದ ಯುವಕರಿಗೆ ಈಜು ಕಲಿಯುವ ತಾಣವಾಗಿತ್ತು. ಆದರೆ ನೀರಿನ ಬವಣೆ ಪ್ರಾರಂಭವಾದಂತೆ ಶಾಮಣ್ಣಬಾವಿಯಲ್ಲಿ ಕೇವಲ ಮಳೆಗಾಲದಲ್ಲಿ ಮಾತ್ರ ನೀರು ಇರುತ್ತಿತ್ತು. ಗೌಡನ ಕೆರೆಯಲ್ಲಿ ಕಳೆ ಗಿಡ ತುಂಬಿಕೊಂಡು ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯ ನೀರು ತುಂಬಿಕೊಂಡಿತು. ಆ ಬಳಿಕ ಶಾಮಣ್ಣ ಬಾವಿಯು ಸೊರಗಿಹೋಗಿತ್ತು. ಕಲ್ಯಾಣಿಯ ಕಲ್ಲುಚಪ್ಪಡಿಗಳ ನಡುವೆ ಕಳೆಗಿಡಗಳು ಬೆಳೆಯತೊಡಗಿದವು. ಕಸ, ತ್ಯಾಜ್ಯ ತುಂಬಿಕೂಂಡು ಬಾವಿಯು ತನ್ನ ಅಸ್ಥಿತ್ವ ಕಳೆದುಕೊಳ್ಳತೊಡಗಿತು.
ಶಾಮಣ್ಣ ಬಾವಿಯಲ್ಲಿ ನೀರು ನಿಂತರೆ ಅಂತರ್ಜಲ ಹೆಚ್ಚುವ ಮೂಲಕ ಕೂಳವೆ ಬಾವಿಗಳಲ್ಲಿ ನೀರು ಸಿಗುತ್ತದೆ. ನಮ್ಮ ಹಿರಿಯರು ನಿರ್ಮಿಸಿದ ಈ ಅಮೂಲ್ಯವಾದ ಆಸ್ತಿಯನ್ನು ಶುಚಿಯಾಗಿರಿಸಿಕೊಳ್ಳುವ ಉದ್ದೇಶದಿಂದ ಶ್ರಮದಾನದ ಮೂಲಕ ಕಳೆಗಿಡಗಳನ್ನು ತೆಗೆದಿದ್ದೇವೆ. ತ್ಯಾಜ್ಯವನ್ನು ಹೊರಕ್ಕೆ ಹಾಕಿದ್ದೇವೆ ಎಂದು ಶ್ರಮದಾನದಲ್ಲಿ ಪಾಲ್ಗೊಂಡ ಯುವಕರು ತಿಳಿಸಿದ್ದಾರೆ.
ಸುದಾಕರ್, ಸೂರಿ, ವೆಂಕಟೇಶ್, ಮಂಜುಗೌಡ, ಮುರಳಿ, ಸೀನಪ್ಪ, ಶ್ರೀಧರ್ ಶ್ರಮದಾನದಲ್ಲಿ ಪಾಲ್ಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.