ADVERTISEMENT

ಚಿಕ್ಕಬಳ್ಳಾಪುರ | ಮತ್ತೆ ಚರ್ಚೆಯಲ್ಲಿ ಶಿಡ್ಲಘಟ್ಟ ಕಾಂಗ್ರೆಸ್ ಟಿಕೆಟ್

ಬ್ಯಾಲಹಳ್ಳಿಗೆ ಕೋಲಾರದಿಂದ ಸ್ಪರ್ಧಿಸಲು ಡಿ.ಕೆ.ಶಿವಕುಮಾರ್ ಸೂಚನೆ?

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 6:03 IST
Last Updated 19 ಮಾರ್ಚ್ 2023, 6:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ವಿಧಾನಸಭೆ ವಿರೋಧದ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅವರ ಕೋಲಾರ ಸ್ಪರ್ಧೆಯ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಈ ಬೆಳವಣಿಗೆ ಶಿಡ್ಲಘಟ್ಟ ಕಾಂಗ್ರೆಸ್ ಟಿಕೆಟ್‌ ಮೇಲೂ ಪರಿಣಾಮ ಬೀರುತ್ತಿದೆ!

ಹೌದು, ತಾವು ಚುನಾವಣಾ ಶಸ್ತ್ರಗಳನ್ನು ಕೆಳಗಿಟ್ಟು, ಶಿಡ್ಲಘಟ್ಟ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಾಂಗ್ರೆಸ್ ಅಭ್ಯರ್ಥಿಯಾಗುವರು ಎಂದು ಶಾಸಕ ವಿ.ಮುನಿಯಪ್ಪ ಫೆ.12ರಂದು ಬಹಿರಂಗವಾಗಿ ಪ್ರಕಟಿಸಿದ್ದರು. ಇದು ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಚರ್ಚೆಯ ಜತೆಗೆ ಜಟಾಪಟಿಗೂ ಕಾರಣವಾಗಿತ್ತು.

ಈ ನಡುವೆ ಸಿದ್ದರಾಮಯ್ಯ ಕೋಲಾರದ ಸ್ಪರ್ಧೆ ಅನಿಶ್ಚಿತವಾದಂತೆ ಇತ್ತ ಗೋವಿಂದಗೌಡರಿಗೆ ಕೋಲಾರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಈ ಕಾರಣದಿಂದಲೇ ಶಿಡ್ಲಘಟ್ಟ ಕ್ಷೇತ್ರದತ್ತ ಗೋವಿಂದಗೌಡ ಮುಖ ಮಾಡಿಲ್ಲ. ಅಂತಿಮವಾಗಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸದಿದ್ದರೆ ಬ್ಯಾಲಹಳ್ಳಿ ಗೋವಿಂದ ಗೌಡ ಸ್ಪರ್ಧಿಸುವ ಸಾಧ್ಯತೆ ಇದೆ.

ಶಿಡ್ಲಘಟ್ಟದಲ್ಲಿ ಬ್ಯಾಲಹಳ್ಳಿಗೆ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಿದ್ದರಾಮಯ್ಯ ಸಹ ಈ ಅವರ ಪರವಾಗಿ ಒಲವು ಹೊಂದಿದ್ದರು ಎನ್ನುತ್ತವೆ ಮೂಲಗಳು. ಈ ನಡುವೆ ರಾಜೀವ್ ಗೌಡ, ಕೆ.ಎಚ್.ಮುನಿಯಪ್ಪ ಅವರ ಮೂಲಕ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಪುಟ್ಟ ಆಂಜನಪ್ಪ ಕೃಷ್ಣಬೈರೇಗೌಡ ಮತ್ತಿತರ ಮೂಲಕ ಟಿಕೆಟ್‌ಗೆ ಪ್ರಯತ್ನಿಸಿದ್ದರು.

ಪುಟ್ಟು ಆಂಜನಪ್ಪ ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸಹ ಸ್ಪರ್ಧಿಸಿದ್ದರು. ಬ್ಯಾಲಹ‌ಳ್ಳಿ ಪ್ರವೇಶದ ಮೂಲಕ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಒಡಕು ಸಹ ಮೂಡಿತ್ತು.

ಈಗ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಅನಿಶ್ಚಿತವಾಗಿರುವುದು, ಡಿ.ಕೆ.ಶಿವಕುಮಾರ್ ಕೋಲಾರ ಕ್ಷೇತ್ರದತ್ತ ಗಮನವಹಿಸುವಂತೆ ಬ್ಯಾಲಹಳ್ಳಿ ಗೋವಿಂದಗೌಡಗೆ ಸೂಚಿಸಿರುವುದು ಶಿಡ್ಲಘಟ್ಟ ಕ್ಷೇತ್ರದ ರಾಜಕಾರಣದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.