ಶಿಡ್ಲಘಟ್ಟ: ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಅಬ್ಲೂಡು ವೃತ್ತದಲ್ಲಿನ ಬೃಹತ್ ಆಲದ ಮರ ಉರುಳಿ ಬಿದ್ದಿದೆ. ಮುಂಜಾನೆ ಮರ ಉರುಳಿ ಬಿದ್ದಿದ್ದರಿಂದ ಆಗಬಹುದಿದ್ದ ಭಾರೀ ದುರಂತ ತಪ್ಪಿದೆ.
ತಾಲ್ಲೂಕಿನಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನ ರಾತ್ರಿಯೂ ಸುರಿದ ಭಾರೀ ಮಳೆಗೆ ಅಬ್ಲೂಡು ಗ್ರಾಮದ ಜನನಿಬಿಡ ವೃತ್ತದಲ್ಲಿ ನೂರು ವರ್ಷಗಳಿಗೂ ಅಧಿಕ ಹಿರಿದಾದ ಆಲದ ಮರ ನೆಲಕ್ಕುರುಳಿದೆ. ರಾತ್ರಿ ಅಲ್ಲಿ ಯಾರೂ ಇರಲಿಲ್ಲವಾದ್ದರಿಂದ ಅನಾಹುತ ನಡೆದಿಲ್ಲ.
ಮರ ಉರುಳಿ ಬಿದ್ದಾಗ ಭಾರಿ ಸದ್ದು ಕೇಳಿಸಿದ್ದು ಗ್ರಾಮಸ್ಥರು ಬಂದು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಕು ಹರಿಯುತ್ತಿದ್ದಂತೆ ಮರವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದು ಮಧ್ಯಾಹ್ನದವರೆಗೂ ತೆರವುಗೊಳಿಸುವ ಕಾರ್ಯ ನಡೆದಿದ್ದು ಸಂಜೆ ನಂತರ ಸಂಚಾರಕ್ಕೆ ಅನುಕೂಲವಾಯಿತು. ಅದುವರೆಗೂ ಪರ್ಯಾಯ ಮಾರ್ಗದಲ್ಲಿ ಸಂಚರಿಸಿದರು.
ಅಬ್ಲೂಡು ವೃತ್ತವು ಸುತ್ತಮುತ್ತಲ ಏಳೆಂಟು ಊರುಗಳಿಗೆ ವ್ಯಾಪಾರ ಕೇಂದ್ರ. ವ್ಯವಹಾರ ಕೇಂದ್ರವೂ ಆಗಿದ್ದು ತಳ್ಳು ಗಾಡಿಗಳಲ್ಲಿ ಹಣ್ಣು ಹಂಪಲು ತರಕಾರಿಗಳನ್ನು ಮಾರುತ್ತಾರೆ. ಆಟೊಗಳನ್ನು ನಿಲ್ಲಿಸುತ್ತಾರೆ. ಪೂಜಾ ಸಾಮಗ್ರಿಗಳನ್ನು ಮಾರುವವರಿಗೂ ಈ ಬೃಹತ್ ಆಲದ ಮರ ನೆರಳು ನೀಡುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.