ADVERTISEMENT

ಗೊಂದಲದಲ್ಲಿ ಶಿಡ್ಲಘಟ್ಟ ಕಾಂಗ್ರೆಸ್; ನಾಯಕರ ಪರಸ್ಪರ ಟೀಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:37 IST
Last Updated 31 ಜುಲೈ 2025, 7:37 IST
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್   

ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಈಗ ಏನಾಗಿದೆ ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರೂ ಹಾಗೂ ಜನಸಾಮಾನ್ಯರಲ್ಲೂ ಉದ್ಭವಿಸಿದೆ.

ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಮತ್ತು ವಿ.ಮುನಿಯಪ್ಪ ಎಂಬ ಮೂರು ಬಣಗಳಿಂದಾಗಿ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ನಾವೇ ಶ್ರೇಷ್ಠ ಎಂದು ಬಿಂಬಿಸಿಕೊಳ್ಳುವಲ್ಲಿ ಇಬ್ಬರು ಮುಖಂಡರು ಪೈಪೋಟಿಗೆ ಇಳಿದಿದ್ದಾರೆ. ಒಬ್ಬರು ವಿ.ಮುನಿಯಪ್ಪ ಜನ್ಮದಿನ, ಸ್ನೇಹಿತನ ನೆನಪು ಎನ್ನುತ್ತಾ ಜನರನ್ನು ಸೆಳೆಯುವ ರಾಜಕಾರಣ ಮಾಡುತ್ತಿದ್ದರೆ, ಮತ್ತೊಬ್ಬರು ದೇವಸ್ಥಾನ, ಸಮುದಾಯಗಳಿಗೆ ದೇಣಿಗೆ ನೀಡುತ್ತಾ ಬೇರೆ ಪಕ್ಷದಲ್ಲಿದ್ದವರು ನಮ್ಮೊಂದಿಗೆ ಬರುತ್ತಿದ್ದಾರೆ ಎನ್ನುವ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್‌ನ ಈ ಎರಡು ಮುಖಂಡರ ಬೆಂಬಲಿಗರು ಪರಸ್ಪರ ಕಿತ್ತಾಡುವ ಸ್ಥಿತಿಗೆ ತಲುಪಿದ್ದಾರೆ.

ರಾಜೀವ್ ಗೌಡ ಬಣದಲ್ಲಿರುವ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಹಾಗೂ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ನಾಗರಾಜ್ ಈಚೆಗಷ್ಟೇ ಪತ್ರಿಕಾಗೋಷ್ಠಿ ನಡೆಸಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ನಾಮನಿರ್ದೇಶನ ಮಾಡಲು ಮೂರುನಾಲ್ಕು ಬಾರಿ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರಿಗೆ ಕೊಟ್ಟರೂ ಶಿಡ್ಲಘಟ್ಟದಲ್ಲಿ ಬಣಗಳು ಇವೆ ಎಂದು ಸಬೂಬು ಹೇಳಿ ನೇಮಕ ಮಾಡುತ್ತಿಲ್ಲ. ಆದರೆ ಅಧಿಕಾರಿಗಳ ವರ್ಗಾವಣೆಗೆ ಮಾತ್ರ ಬಣಗಳು ಇಲ್ಲವಾ, ನೀವು ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿರುವುದು ಅಭಿವೃದ್ಧಿ ಕಾರ್ಯಗಳನ್ನು ಮಾಡಲೋ ಅಥವಾ ಅಧಿಕಾರಿಗಳ ವರ್ಗಾವಣೆ ಮಾಡಲು ಮಾತ್ರವೇ ಎಂದು ಗಂಭೀರ ಆರೋಪ ಮಾಡಿದ್ದರು.

ADVERTISEMENT

ಈಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ‘ಶಿಡ್ಲಘಟ್ಟ ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಗೊಂದಲ ನಿವಾರಿಸಲು ಎಲ್ಲರನ್ನೂ ಕರೆಸಿ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಒಬ್ಬರು ಅವರು ಹೇಳಿದ್ದೇ ನಡೆಯಬೇಕೆಂದು ಬಯಸಿದರೆ ಅದು ಖಂಡಿತಾ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮತ್ತು ಅವರ ಪರವಾಗಿ ಮಾತನಾಡಿದ್ದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ತೋಪಡಾ ನಾಗರಾಜ್ ಅವರ ವಿರುದ್ಧ ಖಾರವಾಗಿ ಮಾತನಾಡಿದರು.

ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದು ಒಂದು ವಿಚಾರ. ಗೆದ್ದರೆ ಆ ಮಾತು ಬೇರೆ, ಸೋತ ಮೇಲೆಯೂ ಎಲ್ಲ ನನ್ನ ಅಣತಿಯಂತೆ ಆಗಬೇಕು ಎನ್ನುವುದು ಸರಿಯಲ್ಲ. ಅಲ್ಪ ಮತಗಳಿಂದ ನೀವು ಸೋತಿದ್ದರೆ ನಿಮಗೆ ಎಲ್ಲಾ ರೀತಿಯಿಂದಲೂ ನಾವು ಗೌರವ ಕೊಡಬಹುದು. ನೀವು ಮೂರನೇ ಸ್ಥಾನ ಪಡೆದಿರುವಿರಿ. ಆದರೂ ನಾವು ನಿಮ್ಮನ್ನೂ ಒಳಗೊಂಡಂತೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು 52 ಸಾವಿರ ಮತ ಪಡೆದವರನ್ನೂ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವೇದಿಕೆಯಲ್ಲಿ ಕರೆದುಕೊಂಡೆವು. ಹಿರಿಯರಾದ ವಿ.ಮುನಿಯಪ್ಪ 45 ವರ್ಷಗಳ ಸೇವೆ, ಕೊಡುಗೆ ಈ ಕ್ಷೇತ್ರಕ್ಕೆ ಇದೆ. ಅವರ ಕುಟುಂಬದ ಬೆಂಬಲಿಗರೂ ಸಾಕಷ್ಟು ಮಂದಿ ಇದ್ದಾರೆ. ಈ ಮೂವರನ್ನೂ ಜೊತೆಗಿಟ್ಟುಕೊಂಡು ಪಕ್ಷವನ್ನು ಕಟ್ಟಬೇಕೆಂಬುದು ನನ್ನ ಉದ್ದೇಶ. ಹಾಗಾಗಿ ಮೂವರನ್ನೂ ಬೆರೆಸಿ ಹಲವಾರು ಸಭೆಗಳನ್ನು ಮಾಡಿದ್ದೇನೆ. ನಾಮ ನಿರ್ದೇಶನ ಸ್ಥಾನ ತುಂಬಲು ಹಂಚಿಕೆ ಮಾಡುವ ಸಂಧಾನಕ್ಕೆ ಒಬ್ಬರು ಒಪ್ಪದೇ ಯಾರದೋ ಮಾತು ಕೇಳಿ ಅಡ್ಡಗಾಲು ಹಾಕುತ್ತಿರುವುದು ನನ್ನ ಇಚ್ಛೆಯಂತೆಯೇ ಆಗಬೇಕು ಎನ್ನುವುದು ಸಾಧ್ಯವಿಲ್ಲ.

ಈಗಾಗಲೇ ಇವರ ಈ ಹಠಮಾರಿತನವನ್ನು ವರಿಷ್ಠರ ಹಾಗೂ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೂ ತಂದಿದ್ದೇನೆ. ಇದನ್ನು ಅರ್ಥಮಾಡಿಕೊಳ್ಳದೇ ಆವೇಶಭರಿತವಾಗಿ ನನ್ನ ಬಗ್ಗೆ ಮಾತನಾಡುವುದು ನಡೆಯುವುದಿಲ್ಲ. ಹೇಗೆ ಬೇಕಾದರೂ ಆಡುವ ರಾಜಕಾರಣ ನಮ್ಮದಲ್ಲ. ನಾವು ಚಿಂತಾಮಣಿಯಲ್ಲಿ ನೇರವಾದ, ಸ್ಪಷ್ಟವಾದ, ಜನರ ಬಗ್ಗೆ ಕಾಳಜಿ, ಬದ್ಧತೆಯಿರುವ ರಾಜಕಾರಣ. ಬೆಳಗ್ಗೆ ಒಂದು, ಮಧ್ಯಾಹ್ನ ಒಂದು, ಸಂಜೆ ಒಂದು ಹೇಳುವ ರಾಜಕೀಯ ಪ್ರವೃತ್ತಿ ನಮ್ಮದಲ್ಲ ಎಂದು ಮಾತು ಬದಲಿಸಿದ್ದ ಡಿಸಿಸಿ ಬ್ಯಾಂಕ್‌ ನ ನಿರ್ದೇಶಕ ಎ. ನಾಗರಾಜ್ ಹೆಸರು ಹೇಳದೇ ಮಾತಿನಲ್ಲೇ ಜಾಡಿಸಿದ್ದರು.

ಕಾಂಗ್ರೆಸ್ ಅನ್ನು ಬೇರು ಸಹಿತ ಕಿತ್ತು ಹಾಕುತ್ತೇವೆ

ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷದ ಸಾದಲಿ ಮತ್ತು ಬಶೆಟ್ಟಹಳ್ಳಿ ಹೋಬಳಿಯ ಸಂಘಟನಾ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾಜಿ ಸಂಸದ ಎಸ್.ಮುನಿಸ್ವಾಮಿ, ಪಾರ್ಥೇನಿಯಂ ಕಳೆ (ಕಾಂಗ್ರೆಸ್ ಗಿಡ) ಯಂತೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕುವುದಾಗಿ ಗುಡುಗಿದ್ದರು.

ಈ ಮಾತಿಗೆ ಕಾಂಗ್ರೆಸ್ ಮುಖಂಡರು ಯಾವುದೇ ವಿರೋಧ ವ್ಯಕ್ತಪಡಿಸದೇ ಮೌನವಾಗಿರುವುದು, ಅವರ ಆಂತರಿಕ ಗೊಂದಲಗಳ ಪ್ರತೀಕವಾಗಿದೆ. ಆದರೆ ಸಂಘಟನೆಯ ಹಿನ್ನೆಲೆಯುಳ್ಳ ಐಎನ್‌ಟಿಯುಸಿ ರಾಜ್ಯ ಸಂಘಟನೆ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಮಾಜಿ ಸಂಸದ ಮುನಿಸ್ವಾಮಿ ಅವರೇ, ನೀವು ಮೊದಲು ಯಾರ ಕೃಪಾಕಟಾಕ್ಷದಿಂದ ಎಂಪಿ ಆಗಿದ್ದೀರಾ ಅದನ್ನು ಮೊದಲು ಆತ್ಮವಲೋಕನ ಮಾಡಿಕೊಳ್ಳಿ. ಈಗಿನ ನಮ್ಮ ಸಚಿವ ಎಂ. ಸಿ.ಸುಧಾಕರ್ ಅವರು ನಿಮಗೆ ಸಹಾಯ ಮಾಡಿಲ್ಲ ಅಂದಿದ್ರೆ ನಿಮಗೆ ಡಿಪಾಸಿಟ್ ಹಣ ಬರುತ್ತಿರ್ಲಿಲ್ಲ’ ಎಂದು ಹೇಳಿದ್ದಾರೆ.

ವಿ.ಮುನಿಯಪ್ಪ
ಪುಟ್ಟು ಆಂಜಿನಪ್ಪ
ರಾಜೀವ್ ಗೌಡ    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.