
ಶಿಡ್ಲಘಟ್ಟ: ನಗರದಲ್ಲಿ ಸೌಂದರ್ಯ ಕಾಪಾಡುವ ಜೊತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರಸಭೆ ವತಿಯಿಂದ ವಿಶೇಷ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
ನಗರಸಭೆ ಪೌರಾಯುಕ್ತೆ ಜಿ. ಅಮೃತಾ ಮಾತನಾಡಿ, ‘ನಗರದ ಕೆಲವು ಭಾಗಗಳಲ್ಲಿ ಸಾರ್ವಜನಿಕರು ನಿರಂತರವಾಗಿ ಕಸ ಸುರಿಯುತ್ತಿದ್ದಾರೆ. ಹೀಗಾಗಿ, ಇಲ್ಲಿ ಯಾರೂ ಕಸ ಹಾಕಬಾರದು ಎಂಬ ಸಂದೇಶ ನೀಡುವ ಉದ್ದೇಶದಿಂದ ಗೋಡೆಗಳ ಮೇಲೆ ಅರ್ಥಪೂರ್ಣವಾಗಿ ಕಲಾಚಿತ್ರಗಳು ಮತ್ತು ಜಾಗೃತಿ ಸಂದೇಶಗಳನ್ನು ಬರೆಯಲಾಗಿದೆ’ ಎಂದು ಹೇಳಿದರು.
ಸ್ವಚ್ಛ ನಗರ ನಿರ್ಮಾಣವು ಕೇವಲ ನಗರಸಭೆ ಹೊಣೆಯಲ್ಲ. ಈ ಕಾರ್ಯಕ್ಕೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು. ಸಾರ್ವಜನಿಕರು ಕಸವನ್ನು ಕಡ್ಡಾಯವಾಗಿ ನಿಗದಿತ ಸ್ಥಳಗಳಲ್ಲಿ ಹಾಕಬೇಕು. ಎಲ್ಲೆಂದರಲ್ಲಿ ಕಸ ಸುರಿಯಬಾರದು. ನಾಗರಿಕರ ಜಾಗೃತಿಯಿಂದಲೇ ಸ್ವಚ್ಛ ಹಾಗೂ ಸುಂದರ ನಗರ ರೂಪಿಸಲು ಸಾಧ್ಯ ಎಂದು ನುಡಿದರು.
ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಕಸ ವಿಂಗಡಣೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯದಿರುವ ಜವಾಬ್ದಾರಿ ಸೇರಿದಂತೆ ಸ್ವಚ್ಛತೆ ಕುರಿತ ಸಂದೇಶಗಳನ್ನು ಗೋಡೆಗಳ ಮೇಲೆ ಚಿತ್ರಗಳನ್ನು ಆಕರ್ಷಕವಾಗಿ ಬಿಡಿಸಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಲಿದೆ. ಜೊತೆಗೆ ನಗರದ ಸೌಂದರ್ಯವೂ ಹೆಚ್ಚಾಗಲಿದೆ ಎಂದು.
ಈ ಸಂದರ್ಭದಲ್ಲಿ ನಗರಸಭೆ ಭುವನ್, ನಾಗರಾಜ್, ಅತೀಕ್, ನರೇಶ್, ಗಿರಿ, ರವಿ, ಮುಬಾರಕ್, ಕಾಜಲ್, ಜ್ಯೋತಿ ಅಮೃತ, ಅನಿತಾ, ಅಂಕಿತಾ, ಅನಿಲಮ್ಮ ಹಾಗೂ ಇತರೆ ನಗರಸಭೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.