
ಶಿಡ್ಲಘಟ್ಟ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ತಮ್ಮ ಬೋಧನೆಗೆ ಡಿಜಿಟಲ್ ಉಪಕರಣ, ವಿಧಾನ ಮತ್ತು ಕೃತಕಬುದ್ಧಿಮತ್ತೆಯ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಸೂಕ್ತ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ, ಉಪನಿರ್ದೇಶಕ ಎಂ.ಮುನಿಕೆಂಪೇಗೌಡ ಹೇಳಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಕಲಿಕಾಪ್ರಗತಿ ಪರಿಶೀಲಿಸಿ, ಮಾಸಿಕ ಇ-ಮ್ಯಾಗಝೀನ್ ಬಿಡುಗಡೆಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳನ್ನೂ ಕಂಪ್ಯೂಟರ್ ಬಳಕೆ, ಸುಲಭ ಮತ್ತು ಆಕರ್ಷಣೀಯವಾಗಿ ಆಸಕ್ತಿದಾಯಕವಾಗಿ ಕಲಿಯುವ ಮತ್ತು ಧಾರಣೆ ಮಾಡಿಕೊಳ್ಳುವ ವಿಧಾನಗಳನ್ನು ಬೋಧಕರು ಕಲಿಸಿಕೊಡಬೇಕು. ಇಂದಿನ ಕಾಲಘಟ್ಟದಲ್ಲಿ ಸುಲಭ ಬೋಧನೆ ಮತ್ತು ಕಲಿಕೆಗಾಗಿ ಅನೇಕ ಅವಕಾಶಗಳಿವೆ. ಕೃತಕಬುದ್ಧಿಮತ್ತೆಯ ಬಳಕೆ ಮೂಲಕ ಮಕ್ಕಳ ಸಮಯದ ಉಳಿತಾಯ, ಸಾಕಷ್ಟು ಕಲಿಕಾ ವಿಷಯಗಳ ಸಂಗ್ರಹ, ಬೆರಳತುದಿಯಲ್ಲಿ ಇಡೀ ಸಮಗ್ರ ವಿಷಯವಸ್ತುವನ್ನು ಕೊಡಬಲ್ಲ ಸಮರ್ಥತೆಯನ್ನು ಗಳಿಸಿಕೊಡಬೇಕು ಎಂದರು.
ಚಿಕ್ಕಬಳ್ಳಾಪುರ ಡಯಟ್ ಹಿರಿಯ ಉಪನ್ಯಾಸಕಿ ಟಿ.ಎಚ್.ಯಶೋಧ ಮಾತನಾಡಿ, ಹೊಸ ಶೈಕ್ಷಣಿಕ ಯುಗಕ್ಕೆ ಹೊಂದಿಕೊಂಡಂತೆ ಶಿಕ್ಷಕರು ಪರೀಕ್ಷೆಗಳು, ಮೌಲ್ಯಮಾಪನ, ಕಲಿಕೋಪಕರಣ ತಯಾರಿ, ಉತ್ತಮ ಶೈಕ್ಷಣಿಕ ನಿರ್ಧಾರ ತೆಗೆದುಕೊಳ್ಳಲು ಕೃತಕಬುದ್ಧಿಮತ್ತೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಎಐ ಬಳಕೆಯು ದೊಡ್ಡ ಪ್ರಮಾಣದಲ್ಲಿ ವಿಚಾರಗಳನ್ನು ಉತ್ಪಾದಿಸುವಷ್ಟು ಸಮರ್ಥವಾಗಿದೆ. ಶಾಲಾ ಯೋಜನೆಯ ಅನುಷ್ಟಾನಗೊಳಿಸುವಲ್ಲಿ ಶಿಕ್ಷಕರಿಗೆ ಸಹಕಾರಿಯಾಗಿದೆ. ಶಾಲೆಯಲ್ಲಿ ಇ-ಮ್ಯಾಗಝೀನ್ ತಯಾರಿ, ಪ್ರಾರ್ಥನಾ ಅವಧಿಯ ಚಟುವಟಿಕೆಗಳ ಸಂಘಟನೆ, ಪರೀಕ್ಷೆಗಳನ್ನು ರೂಪಿಸುವಲ್ಲಿ ಕೃತಕಬುದ್ಧಿಮತ್ತೆ ಬಳಸಿಕೊಳ್ಳಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮಾಸಿಕ ಇ-ಮ್ಯಾಗಝೀನ್ ‘ಸುಗಜ್ಯೋತಿ’ಯ 4ನೇ ಆವೃತ್ತಿಯನ್ನು ಪ್ರಾಂಶುಪಾಲ ಎಂ.ಮುನಿಕೆಂಪೇಗೌಡ ಬಿಡುಗಡೆ ಮಾಡಿದರು. ಶಿಕ್ಷಕ ಮಧು, ಬಿ.ನಾಗರಾಜು, ಶಿಕ್ಷಕಿ ಪ್ರೇಮಾ, ರಕ್ಷಿತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.