ADVERTISEMENT

ಆತ್ಮಕ್ಕೆ ಸಾವಿಲ್ಲ; ದೇಹಕ್ಕಷ್ಟೇ ಮುಕ್ತಿ

ಜಿ.ಆರ್. ನಾರಾಯಣಸ್ವಾಮಿಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 5:38 IST
Last Updated 11 ಏಪ್ರಿಲ್ 2021, 5:38 IST
ಜಿ.ಆರ್.ನಾರಾಯಣಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಿರ್ಮಲಾನಂದನಾಥ ಸ್ವಾಮೀಜಿ
ಜಿ.ಆರ್.ನಾರಾಯಣಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಿರ್ಮಲಾನಂದನಾಥ ಸ್ವಾಮೀಜಿ   

ಚಿಕ್ಕಬಳ್ಳಾಪುರ: ಆತ್ಮಕ್ಕೆ ಎಂದಿಗೂ ಸಾವಿಲ್ಲ. ದೇಹಕ್ಕೆ ಅಷ್ಟೇ ಮುಕ್ತಿ ದೊರೆಯುತ್ತದೆ. ಈ ಭೂಮಿಗೆ ಬಂದ ದೇಹ ಮತ್ತೆ ಸಾವಿನ ಮೂಲಕ ಹೋಗುತ್ತದೆ. ಆದರೆ ಆತ್ಮಕ್ಕೆ ಸಾವಿಲ್ಲ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್. ನಾರಾಯಣಸ್ವಾಮಿ ಅವರಿಗೆ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಆದಿಚುಂಚನಗಿರಿ ಮಠ ಮತ್ತು ಒಕ್ಕಲಿಗರ ಸಂಘ ಎಂದರೆ ನಾರಾಯಣಸ್ವಾಮಿ ಅವರಿಗೆ ಪ್ರಾಣ. ಈ ವಿಚಾರದಲ್ಲಿ ಅವರ ಭಾವನೆಯೇ ಬೇರೆ ಇರುತ್ತಿತ್ತು. ಅವರನ್ನು ನಾವು ತುಂಬಾ ಹತ್ತಿರದಿಂದ ನೋಡಿದ್ದೇವೆ. ಯಾರು ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವರೋ, ಸೇವೆಯಲ್ಲಿ ತೊಡಗಿರುವರೋ ಅವರು ನಿಧರಾದಾಗ ಜಾತಿ, ಧರ್ಮಾತೀತವಾಗಿ ಎಲ್ಲರಿಗೂ ನೋವು ಆಗುತ್ತದೆ ಎಂದು
ತಿಳಿಸಿದರು.

ADVERTISEMENT

ಪುಣ್ಯ ಮತ್ತು ಕರ್ಮಗಳನ್ನು ಯಾರು ಮಾಡಿದ್ದಾರೋ ಅದನ್ನು ಅವರೇ ಅನುಭವಿಸಬೇಕು. ನಾರಾಯಣಸ್ವಾಮಿ ಅವರ ಹೆಸರನ್ನು ಅವರ ಕುಟುಂಬ ಮತ್ತಷ್ಟು ಹೆಚ್ಚಿಸಲಿ. ಅವರು ತಮ್ಮನ್ನು ಸಮಾಜಕ್ಕಾಗಿ ಅರ್ಪಿಸಿಕೊಂಡ ವ್ಯಕ್ತಿ ಎಂದು ಹೇಳಿದರು.

ನಮ್ಮ ಪೂಜ್ಯರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಚಿಕ್ಕಬಳ್ಳಾಪುರ ಎಂದರೆ ಇಷ್ಟ. ಇಲ್ಲಿನ ಬಹಳಷ್ಟು ಜನರು ಮಠದ ಅಭಿವೃದ್ಧಿಗೆ ಕೈಜೋಡಿಸಿದ್ದೀರಿ. ಈ ಎಲ್ಲರು ಮಠಕ್ಕೆ ಸಲ್ಲಿಸಿದ ಸೇವೆ ಅನುಪಮವಾದುದು ಎಂದು ಸ್ಮರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್, ‘ಜಿ.ಆರ್. ನಾರಾಯಣಸ್ವಾಮಿ ನೇರ ಮತ್ತು ಹಟವಾದಿ. ಒಕ್ಕಲಿಗರ ಸಂಘವನ್ನು ಅಧ್ಯಕ್ಷರಾಗಿ ಪಾರದರ್ಶಕವಾಗಿ ನಡೆಸಿಕೊಂಡು ಬಂದಿದ್ದಾರೆ. ಇದು ನಮಗೆ ಆದರ್ಶವಾದುದು’ ಎಂದರು.

ನಾರಾಯಣಸ್ವಾಮಿ ಅವರ ಅಳಿಯ ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಯಲುವಳ್ಳಿ ರಮೇಶ್, ಹೊಸಹುಡ್ಯ ನಾರಾಯಣಸ್ವಾಮಿ, ಡಾ.ಕೆ.ಪಿ.ಶ್ರೀನಿವಾಸಮೂರ್ತಿ ಮಾತನಾಡಿದರು.

ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ನಾರಾಯಣಸ್ವಾಮಿ ಅವರ ಪತ್ನಿ ಕೃಷ್ಣಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ, ಬಿಜೆಪಿ ಮುಖಂಡ ನವೀನ್ ಕಿರಣ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.