
ಶಿಡ್ಲಘಟ್ಟ: ಅವಿಭಜಿತ ಕೋಲಾರ ಜಿಲ್ಲೆ ಪುರಾತನ ದೇವಾಲಯಗಳಲ್ಲಿ ತಾಲ್ಲೂಕಿನ ಗುಡಿಹಳ್ಳಿ ಸೋಮೇಶ್ವರ ದೇವಾಲಯವೂ ಒಂದು. ಶಿವಲಿಂಗದ ಶೈಲಿಯನ್ನು ಗಮನಿಸಿದರೆ ಈ ದೇವಾಲಯ ಗಂಗರ ಕಾಲದಲ್ಲಿ ನಿರ್ಮಾಣವಾಗಿರಬಹುದು. ಆದರೆ, ಶಾಸನಗಳ ಆಧಾರದ ಪ್ರಕಾರ ಚೋಳರ ಕಾಲದಲ್ಲಿ ಈ ದೇವಾಲಯ ಜೀರ್ಣೋದ್ಧಾರವಾಗಿರುವ ದಾಖಲೆಗಳಿವೆ ಎನ್ನುತ್ತಾರೆ ಶಾಸನ ತಜ್ಞರು.
ದೇವಾಲಯದ ಆವರಣದಲ್ಲಿ ಒಟ್ಟು ನಾಲ್ಕು ಶಾಸನಗಳಿವೆ. ಇವು ಎಪಿಗ್ರಾಫಿಯಾ ಕರ್ನಾಟಕದ ಹತ್ತನೇ ಸಂಪುಟದಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ ಮೂರು ಕುಲೋತುಂಗ ಚೋಳನ ಕಾಲದವು. ಒಂದು ಕರ್ನಾಟಕ ಸಾಮ್ರಾಜ್ಯದ ಆರಂಭ ಕಾಲದ್ದು.
66ನೇ ಶಾಸನ (ಕ್ರಿ.ಶ. 1080): ರಾಜಮಾಣಿಕ್ಕವೇಲನ್ ಎಂಬ ವೀರ ಸ್ತ್ರೀಯರ ಮಾನ ಕಾಪಾಡಲು ಹೋಗಿ ಹುತಾತ್ಮನಾದ ಸಂದರ್ಭದ 'ಪೆಣ್ಬಯಿಲ್' ಶಾಸನ ಇದು. ಇದನ್ನು ಆತನ ಮಗ ಇರುಗನ್ ರಾಜಮಾಣಿಕ್ಕವೇಲನ್ ಹಾಕಿಸಿದ.
67ನೇ ಶಾಸನ (ಕ್ರಿ.ಶ. 1346): ದೇವಾಲಯದ ಅಧಿಷ್ಠಾನದ ಮೇಲಿರುವ ಈ ಶಾಸನದ ಪ್ರಕಾರ, ಗುಡಿಹಳ್ಳಿ ಅಂಬಡಕ್ಕಿ ನಾಡಿನ ಭಾಗವಾಗಿತ್ತು. ಆಗ ಅಂಕಯ್ಯನಾಯಕ ಆಡಳಿತಗಾರನಾಗಿದ್ದ. ಅಂಬಡಕ್ಕಿ ನಾಡಿನ ಧರ್ಮಗುರು ಪಾಪಿಸಿಯರ್ ಈ ದೇವಾಲಯ ಜೀರ್ಣೋದ್ಧಾರ ಮಾಡಿಸಿದ ವಿವರಗಳಿವೆ. ಈ ಶಾಸನದ ವಿಶೇಷವೆಂದರೆ, ದೇವಾಲಯ ನಿರ್ವಹಣೆಗೆ ಸಂಗ್ರಹಿಸುತ್ತಿದ್ದ ಸುಂಕಗಳ ಪಟ್ಟಿಯಲ್ಲಿ 'ಅಜೀವಿಕ'ರ ಮೇಲಿನ ತೆರಿಗೆಯೂ ಸೇರಿದೆ.
68ನೇ ಶಾಸನ: ಚೋಳರ ಕಾಲದಲ್ಲಿ ಈ ದೇವರನ್ನು 'ರಾಜೇಂದ್ರಚೋಳ ತೆಕ್ಕೀಶ್ವರಂ ಒಡೆಯ ನಾಯನಾರ್' ಎಂದು ಕರೆಯಲಾಗುತ್ತಿತ್ತು. ಸಿಂಗಯ್ಯನ ಮಗ ವಾಸವಯ್ಯ ಮತ್ತು ಆತನ ಮಗ ದೇವಾಲಯಕ್ಕೆ ಕೊಡುಗೆ ನೀಡಿದ ವಿವರಗಳಿವೆ.
69ನೇ ಶಾಸನ (ಕ್ರಿ.ಶ. 1080): ಈ ಶಾಸನದ ಪ್ರಕಾರ, ಗುಡಿಹಳ್ಳಿಯು 'ವಿಜಯರಾಜೇಂದ್ರಮಂಡಲದ ಕಳವಾರ ನಾಡಿ'ಗೆ ಸೇರಿತ್ತು ಎಂಬ ಮಾಹಿತಿ ಲಭಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.