ADVERTISEMENT

ಶಿಡ್ಲಘಟ್ಟಕ್ಕೆ ಬಜೆಟ್ ಬಗ್ಗೆ ಅಪಾರ ನಿರೀಕ್ಷೆ: ರೇಷ್ಮೆ, ಹೈನು ಅಭಿವೃದ್ಧಿಯ ಕನಸು

ಡಿ.ಜಿ.ಮಲ್ಲಿಕಾರ್ಜುನ
Published 27 ಫೆಬ್ರುವರಿ 2026, 7:15 IST
Last Updated 27 ಫೆಬ್ರುವರಿ 2026, 7:15 IST
ಶಿಡ್ಲಘಟ್ಟದ ತಾಲ್ಲೂಕು ಕಚೇರಿ
ಶಿಡ್ಲಘಟ್ಟದ ತಾಲ್ಲೂಕು ಕಚೇರಿ   

ಶಿಡ್ಲಘಟ್ಟ: ರೇಷ್ಮೆ ಮತ್ತು ಹಾಲಿಗೆ ಶಿಡ್ಲಘಟ್ಟ ತಾಲ್ಲೂಕು ಪ್ರಸಿದ್ಧಿ. ಈ ಎರಡೂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಉತ್ತೇಜನ ಸಿಗುವ ಯೋಜನೆಗಳ ಬಗ್ಗೆ ಇಲ್ಲಿನ ಜನರು  ಬಜೆಟ್ ಕುರಿತಾಗಿ ಕಾತುರ ಹೊಂದಿದ್ದಾರೆ.

2025ರ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು 17 ಮಂದಿ ಸಚಿವರು, ಶಾಸಕರು ಶಿಡ್ಲಘಟ್ಟಕ್ಕೆ ಬಂದಿದ್ದರು. ₹ 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಸೇರಿದಂತೆ ₹ 650 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದರು.

ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಕಾಮಗಾರಿ ನಡೆಯುತ್ತಿದೆ. ನೀರಾವರಿ ಯೋಜನೆ, ನೂರು ಹಾಸಿಗೆಯ ಅತ್ಯುತ್ತಮ ಸುಸಜ್ಜಿತ ಆಸ್ಪತ್ರೆ, ತಾಯಿ ಮಗು ಆಸ್ಪತ್ರೆ, ನೆಹರೂ ಕ್ರೀಡಾಂಗಣದ ಅಭಿವೃದ್ಧಿ, ಅಂಬೇಡ್ಕರ್ ಭವನ, ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ 200 ಕಿ.ಮೀ ಹಳ್ಳಿ ರಸ್ತೆಗಳ ಅಭಿವೃದ್ಧಿ ತುರ್ತಾಗಿ ಆಗಬೇಕಿದೆ. ಇವುಗಳೊಂದಿಗೆ ಗ್ರಂಥಾಲಯ, ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

ADVERTISEMENT

ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆ, ಹೊಸದಾಗಿ ಅಂಗನವಾಡಿ ಕೇಂದ್ರ ತೆರೆಯಲು, ಅಂಗವಿಕಲರ ವಸತಿನಿಲಯ, ಶಾಶ್ವತ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ಸ್ಥಳೀಯರು ಈ ಬಾರಿಯ ಬಜೆಟ್‌ ಮೇಲೆ ಅಪಾರವಾದ ನಿರೀಕ್ಷೆ ಹೊಂದಿದ್ದಾರೆ. 

ಬಿ.ಎನ್.ರವಿಕುಮಾರ್
ಎ.ಎಂ.ತ್ಯಾಗರಾಜ್ 
ಭಕ್ತರಹಳ್ಳಿ ಪ್ರತೀಶ್ 

ಮುಖ್ಯಮಂತ್ರಿಯ ವಾಗ್ದಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಬಂದಾಗ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ  ಸ್ಪಂದಿಸಿದ ಮುಖ್ಯಮಂತ್ರಿ ಅವರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿ ಮಿನಿ ವಿಧಾನಸೌಧ ನಿರ್ಮಾಣ ಕೇಂದ್ರ ಗ್ರಂಥಾಲಯ ಕಟ್ಟಡ ನಿರ್ಮಾಣ ನೆಹರೂ ಕ್ರೀಡಾಂಗಣ ಅಭಿವೃದ್ದಿ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ ಅನುದಾನ ನೀಡುವಂತೆ ಹಾಗೂ ಕ್ಷೇತ್ರದ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದೆ. ಈ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡುವ ಬಗ್ಗೆ ನಿರೀಕ್ಷೆಯಿದೆ - ಬಿ.ಎನ್.ರವಿಕುಮಾರ್ ಶಾಸಕ 

‘3ನೇ ಹಂತದ ಶುದ್ಧೀಕರಣ ಅಗತ್ಯ’

ಬಯಲು ಸೀಮೆಯ ಜಿಲ್ಲೆಗಳ ತರಕಾರಿಗಳಲ್ಲಿ ವಿಷದ ಅಂಶ ಕಂಡುಬರುತ್ತಿದೆ. ಅಂತರ್ಜಲ ಕಲುಷಿತ ಆಗಿದೆ. ಎಚ್.ಎನ್. ವ್ಯಾಲಿ ಯೊಜನೆಯಿಂದ ಜಿಲ್ಲೆಯ ಕೆರೆಗಳಿಗೆ ನೀರು ಬಿಡಲಾಗುತ್ತಿದೆ. ಈ ನೀರನ್ನು 3ನೇ ಹಂತದಲ್ಲಿ ಶುದ್ದಿಕರಿಸಲು ಕ್ರಮ ವಹಿಸಬೇಕು. ಕೃಷ್ಣ ನದಿಯ ನೀರಿನಲ್ಲಿ ನಮ್ಮ ರಾಜ್ಯದ ಪಾಲಿದೆ. ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ತರಬೇಕು. ರೈತರ ಬೆಳೆಗಳಿಗೆ ಬೆಲೆ ಇಳಿಮುಖವಾದಾಗ ಹಣ್ಣು ತರಕಾರಿಗಳನ್ನು ಶೇಖರಿಸಲು ತಾಲ್ಲೂಕು ಕೇಂದ್ರದಲ್ಲಿ ಸಂಸ್ಕರಣ ಘಟಕ ತೆರೆಯಬೇಕು. ಶಿಡ್ಲಘಟ್ಟದಲ್ಲಿ ರೇಷ್ಮೆ ಸೀರೆಗಳನ್ನು ತಯಾರು ಮಾಡುವ ರೇಷ್ಮೆ ಸೀರೆ ಕಾರ್ಖಾನೆ ತೆರೆಯಲು ಕ್ರಮ ವಹಿಸಬೇಕು -ಭಕ್ತರಹಳ್ಳಿ ಪ್ರತೀಶ್ ರೈತ ಮುಖಂಡ   *** ಶಾಶ್ವತ ನೀರಾವರಿ ಅಗತ್ಯ ಎಚ್.ಎನ್. ವ್ಯಾಲಿ ನೀರು ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ತರಕಾರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಈ ವಿಚಾರವಾಗಿ ಸರ್ಕಾರ ಪ್ರಮುಖವಾಗಿ ಗಮನವಹಿಸಬೇಕು.   ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿದರೆ ರೈತರು ಉತ್ತಮ ಬೆಳೆ ಪಡೆಯಲು ಸಾಧ್ಯ. ಅಂತರ್ಜಲ ವೃದ್ಧಿಯಾಗುತ್ತದೆ. ಇದನ್ನು ಬಜೆಟ್‌ನಲ್ಲಿ ನಿರೀಕ್ಷಿಸುತ್ತಿದ್ದೇವೆ. -ಎ.ಎಂ.ತ್ಯಾಗರಾಜ್ ರೈತ ಅಪ್ಪೇಗೌಡನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.