ADVERTISEMENT

ಶಿಡ್ಲಘಟ್ಟ | ರಾಗಿ ಖರೀದಿ ಕೇಂದ್ರಕ್ಕೆ ತಹಶೀಲ್ದಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:14 IST
Last Updated 27 ಫೆಬ್ರುವರಿ 2026, 7:14 IST
ಶಿಡ್ಲಘಟ್ಟ ವರದಹಳ್ಳಿಯಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಎನ್.ಗಗನ ಸಿಂಧು ಅವರು ಆಹಾರ ಶಿರಸ್ತೇದಾರ್ ಮೋಹನ್ ಕುಮಾರ್ ಅವರಿಂದ ಮಾಹಿತಿ ಪಡೆದರು
ಶಿಡ್ಲಘಟ್ಟ ವರದಹಳ್ಳಿಯಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಎನ್.ಗಗನ ಸಿಂಧು ಅವರು ಆಹಾರ ಶಿರಸ್ತೇದಾರ್ ಮೋಹನ್ ಕುಮಾರ್ ಅವರಿಂದ ಮಾಹಿತಿ ಪಡೆದರು   

ಶಿಡ್ಲಘಟ್ಟ: ಕನಿಷ್ಠ ಬೆಂಬಲ ಬೆಲೆಗೆ ರಾಗಿ ನೀಡಲು ನೋಂದಾಯಿಸಿಕೊಂಡ ತಾಲ್ಲೂಕಿನ ಎಲ್ಲ ರೈತರು ಆದಷ್ಟು ಬೇಗ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಬೇಕು ಎಂದು ತಹಶೀಲ್ದಾರ್ ಎನ್.ಗಗನ ಸಿಂಧು ಅವರು ರೈತರಲ್ಲಿ ಮನವಿ ಮಾಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಜೊತೆ ವರದಹಳ್ಳಿಯಲ್ಲಿನ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ತಾಲ್ಲೂಕಿನ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು (2055 ಮಂದಿ) ರಾಗಿ ಮಾರಾಟ ಮಾಡಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇದುವರೆಗೂ 130 ರೈತರಷ್ಟೇ ರಾಗಿಯನ್ನು ತಂದು ಮಾರಾಟ ಮಾಡಿದ್ದಾರೆ.

ADVERTISEMENT

44,474.50 ಕ್ವಿಂಟಾಲ್ ರಾಗಿ ಪೈಕಿ 2,995.50 ಕ್ವಿಂಟಾಲ್‌ನಷ್ಟು ರಾಗಿ ಮಾತ್ರ ಖರೀದಿ ಕೇಂದ್ರದಲ್ಲಿ ಮಾರಾಟವಾಗಿದೆ ಎಂದರು.

ಬೆಂಬಲ ಬೆಲೆಯಡಿ ರಾಗಿ ಖರೀದಿ ಯೋಜನೆಯು ಮಾರ್ಚ್ 26ರಂದು ಕೊನೆಯ ದಿನವಾಗಿದೆ. ಉಳಿದ ರೈತರು ವೇ ಬ್ರಿಜ್‌ಗಳಲ್ಲಿ ತೂಕ ಮಾಡಿಸಿಕೊಂಡು ಬಂದು ರಾಗಿ ಮಾರಾಟ ಮಾಡಬೇಕು ಎಂದು ರೈತರಲ್ಲಿ ಮನವಿ ಮಾಡಿದರು. 

ಆಹಾರ ಶಿರಸ್ತೇದಾರ್ ಮೋಹನ್ ಕುಮಾರ್ ಮಾತನಾಡಿ, ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯಿರುವ ಸುಮುಖ ವೇ ಬ್ರಿಜ್ ಹಾಗೂ ನಗರದ ದಿಬ್ಬೂರಹಳ್ಳಿಯ ಬೈಪಾಸ್ ರಸ್ತೆಯ ಮಾರುತಿ ವೇ ಬ್ರಿಜ್‌ಗಳನ್ನು ಗುರುತಿಸಲಾಗಿದ್ದು, ರೈತರು ಅಲ್ಲಿ ರಾಗಿ ತೂಕ ಮಾಡಿಸಿಕೊಂಡು ಸೂಕ್ತ ದಾಖಲೆ ತರಬೇಕು ಎಂದರು. 

ಮಾರ್ಚ್ 26ರವರೆಗೆ ಮಾತ್ರ ರಾಗಿ ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿದೆ. ನೋಂದಾಯಿಸಿರುವ ರೈತರ ಪೈಕಿ ಶೇ 10ಷ್ಟು ರೈತರು ಮಾತ್ರವೇ ರಾಗಿ ಮಾರಾಟ ಮಾಡಿದ್ದು, ಇನ್ನುಳಿದ ರೈತರು ಆದಷ್ಟು ಬೇಗ ರಾಗಿ ಮಾರಾಟ ಮಾಡಬೇಕು ಎಂದು ಹೇಳಿದರು. 

ಆಹಾರ ನಿರೀಕ್ಷಕ ಪ್ರಕಾಶ್, ರಾಗಿ ಮಾರಾಟ ಮಾಡಲು ಬಂದಿದ್ದ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.