ADVERTISEMENT

ಮಾ.11ರಂದು ವಿಧಾನಸೌಧಕ್ಕೆ ಮುತ್ತಿಗೆ

ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಮಾದಿಗ ದಂಡೋರ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 13:31 IST
Last Updated 8 ಮಾರ್ಚ್ 2020, 13:31 IST

ಚಿಕ್ಕಬಳ್ಳಾಪುರ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಒತ್ತಾಯಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಮಾರ್ಚ್‌ 11ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಮಾದಿಗ ದಂಡೋರ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಎಂ.ನರಸಿಂಹಯ್ಯ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿವೆ. ಕೇವಲ ಭರವಸೆಗಳನ್ನು ನೀಡುವುದರಲ್ಲಿ ಕಾಲಹರಣ ಮಾಡುತ್ತಿವೆ’ ಎಂದು ತಿಳಿಸಿದರು.

‘ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದರು. ಅದೇ ಸಭೆಯಲ್ಲಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸಹ ಬಿಜೆಪಿಯಿಂದ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಸಿದ್ಧರಾಮಯ್ಯ ವಿಫಲರಾಗಿ ಅಧಿಕಾರವನ್ನು ಕಳೆದುಕೊಂಡರು. ಜಗದೀಶ ಶೆಟ್ಟರ್ ಅವರ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಅವರು ಸಹ ಅಧಿಕಾರಕ್ಕೆ ಬಂದ ಮೇಲೆ ಮಾತನಾಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ತುಳಿತಕ್ಕೊಳಗಾದವರಿಗೆ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದರು. ಮಾದಿಗ ಜನಾಂಗದ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ಬದಲಾಗಿಲ್ಲ. ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜಾತಿಗೆ ಸೇರಿದವರಲ್ಲಿ ಅತ್ಯಂತ ಹೆಚ್ಚಿನ ಶೋಷಣೆಗೆ ಒಳಗಾಗಿರುವರು ಮಾದಿಗ ಜನಾಂಗದವರು. ಪರಿಶಿಷ್ಟರಿಗೆ ಕಲ್ಪಿಸಿರುವ ಮೀಸಲು ಸೌಲಭ್ಯ ಸ್ಪೃಶ್ಯ ಸಮುದಾಯಗಳ ಪಾಲಾಗುತ್ತಿದ್ದು, ನಾವು ಮುಖ್ಯ ವಾಹಿನಿಗೆ ಬರಬೇಕೆಂದರೆ ಒಳ ಮೀಸಲಾತಿ ಜಾರಿಗೆ ಬರಲೇಬೇಕು’ ಎಂದು ಆಗ್ರಹಿಸಿದರು.

‘ಮಾರ್ಚ್ 11ರಂದು ಹಮ್ಮಿಕೊಂಡಿರುವ ಮುತ್ತಿಗೆ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಮಾದಿಗ ಸಮುದಾಯದವರು ಬರಬೇಕು. ವಿಧಾನಸೌಧದಲ್ಲಿ ಕುಳಿತಿರುವವರಿಗೆ ನಮ್ಮ ದನಿ ಮುಟ್ಟಿಸಬೇಕು. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಬದಲಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲಿಕ್ಕೆ’ ಎಂದು ಸ್ಪಷ್ಟಪಡಿಸಿದರು.

ಮಾದಿಗ ದಂಡೋರ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಿ.ವಿ.ವೀಣಾ, ಜಿಲ್ಲಾ ಘಟಕ ಅಧ್ಯಕ್ಷ ಎಂ.ವಿ.ರಾಮಪ್ಪ, ಮುಖಂಡ ಪಟ್ರೇನಹಳ್ಳಿ ಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.