ADVERTISEMENT

ಪರಿಸರ ಅಸಮತೋಲನ ತಡೆಗೆ ಕೈಜೋಡಿಸಿ

ಕೆಳಗಿನತೋಟದಲ್ಲಿ ಶ್ರೀಸ್ಕಂದ ಮಹಿಳಾ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 10:29 IST
Last Updated 16 ಫೆಬ್ರುವರಿ 2020, 10:29 IST
ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಸುನಿತಾ ಮೂರ್ತಿ ಅವರು ಸಸಿಗೆ ನೀರೆರೆಯುವ ಮೂಲಕ ಮಹಿಳಾ ಸಂಘ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಸುನಿತಾ ಮೂರ್ತಿ ಅವರು ಸಸಿಗೆ ನೀರೆರೆಯುವ ಮೂಲಕ ಮಹಿಳಾ ಸಂಘ ಉದ್ಘಾಟಿಸಿದರು.   

ಚಿಕ್ಕಬಳ್ಳಾಪುರ: ‘ಆಧುನಿಕತೆಯ ಹೆಸರಿನಲ್ಲಿ ಹೆಚ್ಚಿನ ಪರಿಸರದ ಹನನದಿಂದಾಗಿ ಹವಾಮಾನ ವೈಪರಿತ್ಯ, ಪ್ರಕೃತಿ ವಿಕೋಪಗಳು ಹೆಚ್ಚಿ, ಜೀವಸಂಕುಲಕ್ಕೆ ಆಪತ್ತು ಎದುರಾಗಿದ್ದು, ಪ್ರಕೃತಿಯಲ್ಲಿ ಸಮತೋಲನ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು’ ಎಂದು ಸಮಾಜ ಸೇವಕಿ ಸುನಿತಾ ಮೂರ್ತಿ ಹೇಳಿದರು.

ನಗರದ ಕೆಳಗಿನತೋಟದಲ್ಲಿ ಶ್ರೀಸ್ಕಂದ ಮಹಿಳಾ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ‘ಸಕಲ ಚರಾಚರಗಳ ಉಸಿರಾಟಕ್ಕೆ ಆಮ್ಲಜನಕ ಅಗತ್ಯ. ಅಂತಹ ಅಮೂಲ್ಯ ಆಮ್ಲಜನಕವನ್ನು ಉತ್ಪಾದಿಸುವ ಮರಗಳನ್ನು ಮನುಷ್ಯ ವಿವೇಚನೆ ಇಲ್ಲದೆ ಕಡಿದು ಹಾಕುತ್ತಿದ್ದಾನೆ. ಪರಿಣಾಮ, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಪ್ರಕೃತಿ ವಿಕೋಪದಂತಹ ಸನ್ನಿವೇಶ ಎದುರಿಸುವ ಜತೆಗೆ ಬರ, ಅಂತರ್ಜಲ ಕುಸಿತದಂತಹ ಸಮಸ್ಯೆಗಳು ಉಲ್ಭಣಗೊಳ್ಳುತ್ತಿವೆ’ ಎಂದು ತಿಳಿಸಿದರು.

‘ಹಿಂದಿನ ಕಾಲದಲ್ಲಿ ಅರಣ್ಯ ಸಂಪತ್ತು ಸಮೃದ್ಧವಾಗಿತ್ತು. ಸಕಾಲಕ್ಕೆ ಮಳೆಯಾಗಿ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಆದರೆ, ಈಗ ಗಿಡ ಮರ ಕಡಿತದಿಂದಾಗಿ ವಾತಾವರಣ ಕಲುಷಿತಗೊಂಡು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಪರಿಸರ ವಿನಾಶದಿಂದಾಗಿ ಜೀವವೈವಿಧ್ಯತೆ ನಾಶವಾಗುತ್ತಿದೆ. ಜನಸಂಖ್ಯೆಗೆ ಹೋಲಿಸಿದರೆ ಮರಗಳ ಸಂಖ್ಯೆ ಕಡಿಮೆಯಿದ್ದು, ಶುದ್ಧ ಗಾಳಿ ಸಿಗುತ್ತಿಲ್ಲ. ಜಲ ಮಾಲಿನ್ಯದಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಜನ ಎಚ್ಚೆತ್ತು ಪರಿಸರ ಮಾಲಿನ್ಯ ತಡೆಯಬೇಕು. ಇಲ್ಲದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ’ ಎಂದರು.

ADVERTISEMENT

‘ಅರಣ್ಯನಾಶದಿಂದಾಗಿ ನೀರನ್ನು ರಕ್ಷಿಸಿ ಎಂಬುದರಿಂದ ಈಗ, ನೀರಿನಿಂದ ರಕ್ಷಿಸಿ ಎಂಬ ಸಂದಿಗ್ಧ ಪರಿಸ್ಥಿತಿಗೆ ತಲುಪಿದ್ದೇವೆ. ವಿವಿಧ ಮಾಲಿನ್ಯ ಕಾರಕಗಳಿಂದಾಗಿ ಭೂ ತಾಪಮಾನ ಹೆಚ್ಚುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಆಮ್ಲಜನಕ ಖರೀದಿಸಬೇಕಾದ ದಿನಗಳು ಬಂದರೂ ಅಚ್ಚರಿ ಇಲ್ಲ. ಪರಿಸರ ಸಮತೋಲನವಾಗಿದ್ದರೆ ಮಳೆ ಕೂಡ ಸಕಾಲಕ್ಕೆ ಸುರಿಯುತ್ತದೆ. ಉತ್ತಮವಾಗಿ ಮಳೆ ಸುರಿದರೆ ರೈತರಿಗೆ ಅನುಕೂಲವಾಗುವ ಜತೆಗೆ ಜನ, ಜಾನುವಾರುಗಳಿಗೆ ನೀರು ಲಭ್ಯವಾಗುತ್ತದೆ’ ಎಂದು ಹೇಳಿದರು.

‘ಪ್ರತಿಯೊಬ್ಬರೂ ಮನೆಗೆ ತಲಾ ಎರಡರಂತೆ ಸಸಿಗಳನ್ನು ನೆಟ್ಟು ಬೆಳೆಸಬೇಕು. ಮರ ಗಿಡ ಬೆಳೆಸುವುದರಿಂದ ಆಗುವ ಪ್ರಯೋಜನದ ಬಗ್ಗೆ ನೆರೆಹೊರೆಯವರಿಗೆ ಅರಿವು ಮೂಡಿಸಬೇಕು. ಖಾಲಿ ಜಾಗ ಹಾಗೂ ಶಾಲೆ ಆವರಣದಲ್ಲಿ ಸಸಿ ನೆಡಬೇಕು. ಹೆಚ್ಚಾಗಿ ಗಿಡ ಮರ ಬೆಳೆಸಿದರೆ ಕಾಲ ಕಾಲಕ್ಕೆ ಉತ್ತಮ ಮಳೆಯಾಗಿ ನೀರಿನ ಸಮಸ್ಯೆ ಬಗೆಹರಿಯುತ್ತದೆ’ ಎಂದು ತಿಳಿಸಿದರು.

ಸಂಘದ ಸದಸ್ಯೆಯರಾದ ನಳಿನಾ ಶ್ರೀನಿವಾಸ್, ನಾಗರತ್ನಮ್ಮ, ವರ್ಷಾ, ಶಿಲ್ಪಾ, ಹರಿಣಿ, ಅಶ್ವಿನಿ, ಭವ್ಯಾ, ಚೈತ್ರಾ, ವೇದಾ, ನರಸಮ್ಮ, ವೀಣಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.